ಸೆ.13: ಉಡುಪಿ ನಗರಸಭೆಯಿಂದ ಬೃಹತ್ ಉದ್ಯೋಗ ಮೇಳ

ಉಡುಪಿ, ಆ.29: ಉಡುಪಿ ನಗರಸಭೆ ಮತ್ತು ಮಲ್ಪೆ ಕಡಲತೀರದ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಎಂಎಸ್/ಎಸ್ ಯಶಸ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಸಹಭಾಗಿತ್ವದಲ್ಲಿ ಸೆ.13ರ ಬೆಳಗ್ಗೆ 8:30ರಿಂದ ಸಂಜೆ 5:00ರವರೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳವೊಂದನ್ನು ಆಯೋಜಿಸಲಾಗುತ್ತದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ನಗರಸಭೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 100ಕ್ಕೂ ಅಧಿಕ ಕಂಪೆನಿಗಳು ಮೇಳಕ್ಕೆ ನೋಂದಣಿ ಮಾಡಿ ಕೊಂಡಿವೆ. 4,000ಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಉದ್ಯೋಗ ಮೇಳದಲ್ಲಿ ಒಟ್ಟು 1500ಕ್ಕೂ ಅಧಿಕ ವಿವಿಧ ದರ್ಜೆಯ ಉದ್ಯೋಗಗಳು ಲಭ್ಯವಿರುವ ನಿರೀಕ್ಷೆ ಇದೆ ಎಂದರು.
ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಹಾಗೂ ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲೇ ಉದ್ಯೋಗ ಸಿಗುವಂತಾಗಲು ನಗರಸಭೆ ಈ ಉದ್ಯೋಗ ಮೇಳವನ್ನು ಆಯೋಜಿಸುತಿದ್ದು, ಇದನ್ನು ಪ್ರತಿವರ್ಷವೂ ಮುಂದು ವರಿಸುವ ನಿರ್ಧಾರವನ್ನು ನಗರಸಭೆ ಮಾಡಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.
ನಗರಸಭೆಯ ವತಿಯಿಂದ ನಡೆಯುವ ಎರಡನೇ ಉದ್ಯೋಗ ಮೇಳ ಇದಾಗಿದ್ದು, ಕಳೆದ ವರ್ಷ ಬನ್ನಂಜೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,400ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಕ್ಕಿದೆ. ಈ ಬಾರಿ ಅಜ್ಜರಕಾಡು ಮೈದಾನದಲ್ಲಿ 75 ಕೌಂಟರ್‌ಗಳನ್ನು ಹಾಕಲಾಗುವುದು. ಆಸಕ್ತರು ಆನ್‌ಲೈನ್ ಮೂಲಕವೂ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಶ್ರೀಜ್ಞಾನ ಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ಜ್ಞಾನೇಶ್ವರ ಕೋಟ್ಯಾನ್ ಉಪಸ್ಥಿತರಿದ್ದರು.







