ಜು.13ರಂದು ‘ಕೊರಗ ನ್ಯಾಯಕ್ಕಾಗಿ ಪ್ರತಿಭಟನೆ -ಹಕ್ಕೊತ್ತಾಯ’

ಉಡುಪಿ, ಜು.4: ಆಲೂರು ಹಾಗೂ ಹರ್ಕೂರು ಗ್ರಾಮದ ಭೂಹೀನ ಕೊರಗ(ಪರಿಶಿಷ್ಟ ಪಂಗಡ) ಕುಟುಂಬಗಳಿಗೆ ಭೂಮಿ ಮಂಜೂರು ಮಾಡುವಲ್ಲಿ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿರುವ ಅನಗತ್ಯ ವಿಳಂಬವನ್ನು ಖಂಡಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಜು.13ರಂದು ಬೆಳಗ್ಗೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಳ್ಳ ಲಾಗಿದೆ.
ಆಲೂರು ಗ್ರಾಮದ ಸರ್ವೇ ನಂ.153 ಹಾಗೂ ಹರ್ಕೂರು ಗ್ರಾಮದ ಸರ್ವೇ ನಂ.135ಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯ ಕಳೆದ ಹತ್ತು ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದೆ. ಈ ಸಂಬಂಧ ಈಗಾಗಲೇ ಕಂದಾಯ, ಅರಣ್ಯ, ಸರ್ವೇ, ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆದಿದ್ದು, ವಿವಿಧ ಇಲಾಖೆಗಳ ದಾಖಲೆಗಳು, ವರದಿಗಳು ಹಾಗೂ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.
ಗೇರು ಅಭಿವೃದ್ಧಿ ನಿಗಮದ ಆಧಾರರಹಿತ ಆಕ್ಷೇಪಣೆಗಳನ್ನು ತಿರಸ್ಕರಿಸಿ, ಆಲೂರು ಗ್ರಾಮದ ಸರ್ವೇ ನಂ.153ರ ಡಿ.ಸಿ. ಮನ್ನಾ ಭೂಮಿಯನ್ನು ಭೂಹೀನ ಕೊರಗ ಕುಟುಂಬಗಳಿಗೆ ತಕ್ಷಣ ಮಂಜೂರು ಮಾಡಬೇಕು. ಹಾಗೆಯೇ ಹರ್ಕೂರು ಗ್ರಾಮದ ಸರ್ವೇ ನಂ.135ರಲ್ಲಿ 1984-85ರಲ್ಲಿಯೇ ಮಂಜೂರಾಗಿರುವ ಡಿ.ಸಿ. ಮನ್ನಾ ಭೂಮಿಯನ್ನು ಗೇರು ನಿಗಮದ ಸ್ವಾಧೀನದಿಂದ ಬಿಡುಗಡೆಗೊಳಿಸಿ ಮೂಲ ಫಲಾನುಭವಿಗಳಿಗೆ ತಕ್ಷಣ ಹಸ್ತಾಂತರ ಮಾಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಈ ಪ್ರಕರಣಕ್ಕೆ ಅಂತಿಮ ಆಡಳಿತಾತ್ಮಕ ನಿರ್ಧಾರ ಕೈಗೊಂಡು ಕೊರಗ ಸಮುದಾ ಯಕ್ಕೆ ನ್ಯಾಯ ಒದಗಿಸಬೇಕು ಎಂಬ ಆಗ್ರಹದೊಂದಿಗೆ ನಡೆಯಲಿರುವ ಈ ಪ್ರತಿಭಟನೆಗೆ ಕೊರಗ ಸಮುದಾಯದ ಕುಟುಂಬಗಳು, ವಿವಿಧ ಜನಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ ಶ್ರೀೀಧರ ನಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






