80ವರ್ಷ ಪೂರೈಸಿದ 14 ಮಂದಿ ಹಿರಿಯ ನಾಗರಿಕರಿಗೆ ಸನ್ಮಾನ

ಉಡುಪಿ, ನ.11: ಉಡುಪಿ ಹಿರಿಯ ನಾಗರಿಕರ ಸಂಸ್ಥೆ ವತಿಯಿಂದ 2024-25ನೇ ಸಾಲಿನಲ್ಲಿ 80ವರ್ಷ ಪೂರೈಸಿದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಅಜ್ಜರಕಾಡು ಪುರಭವನದ ಮಿನಿ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ 80ವರ್ಷ ಪೂರೈಸಿದ ಸಂಸ್ಥೆಯ ಸದಸ್ಯರಾದ ಕೆ.ಎಸ್. ಗೋವಿಂದರಾಜು, ಕೆ.ವಿಠಲದಾಸ್ ಶಾನ್ಬೋಗ್, ಎನ್.ನಿರಂಜನ ಬಲ್ಲಾಳ್, ಪಿ.ಹರಿಶ್ಚಂದ್ರ ಹೆಗ್ಡೆ, ಅಂಜಾರು ನಿತ್ಯಾನಂದ ಹೆಗ್ಡೆ, ವೈ.ಎನ್. ಪ್ರಭಾಕರ ರಾವ್, ಕೆ.ಗೋವರ್ಧನ್ ಭಟ್, ರಾಧಾಕೃಷ್ಣ ಉಪಾಧ್ಯ, ಡಾ. ನಾರಾಯಣ ಭಟ್ ಮೊಗಸಾಲೆ, ಬಿ.ವಾಸುದೇವ ಮಯ್ಯ, ಕೆ.ಪ್ರಭಾಕರ ಆಚಾರ್ಯ, ಸಲಾವುದ್ದೀನ್ ಸಾಹೇಬ್, ಕೆ.ವಂಕಟರಾಜು ಸರಳಾಯ, ಸರಸ್ವತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿಯ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಮಾತನಾಡಿ, ಐಷರಾಮಿಯಾಗಿ ಬದುಕುದಕ್ಕಿಂತ ಗುಣಮಟ್ಟದ ಬದುಕು ಮುಖ್ಯವಾಗುತ್ತದೆ. ನಮ್ಮ ಜೀವನ ಶೈಲಿಯಲ್ಲಿ ಆಯುಷ್ಯ ಅಡಗಿದೆ. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಹಿರಿಯನಾಗರಿಕರು ಬದುಕು ನಡೆಸಿದ್ದಾರೆ. ಇದರಿಂದ ಇವರ ಆಯುಷ್ಯ ಕೂಡ ವೃದ್ಧಿಯಾಗುತ್ತದೆ ಹಿರಿಯ ನಾಗರಿಕರು ಈ ಸಮಾಜದ ಆಸ್ತಿ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಪಿ.ನಾಗರಾಜ ರಾವ್ ವಹಿಸಿದ್ದರು. ಉಡುಪಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್ ಮಾತನಾಡಿದರು. ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ, ಕಾರ್ಯದರ್ಶಿ ನಂದಕುಮಾರ್, ಕೋಶಾಧಿಕಾರಿ ಉಮೇಶ್ ರಾವ್ ಉಪಸ್ಥಿತರಿದ್ದರು.
ಉಡುಪಿ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎಚ್.ವಿಶ್ವನಾಥ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕೆ.ಮುರಳೀಧರ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಜಯ ತಂತ್ರಿ ವಂದಿಸಿದರು. ಮಾಲತಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.







