ಆ.15: ಉಡುಪಿ ತಾಲೂಕು ಬ್ರಾಹ್ಮಣ ಸಭಾದ ‘ಆಟಿಡೊಂಜಿ ದಿನ’

ಉಡುಪಿ, ಆ.12: ಉಡುಪಿ ತಾಲೂಕು ಬ್ರಾಹ್ಮಣ ಸಭಾ ರಚನೆಯಾಗಿ 27 ವರ್ಷಗಳನ್ನು ಕಳೆದು 28ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಆ.15ರ ಶುಕ್ರವಾರ ಉಡುಪಿ ಕಿನ್ನಿಮೂಲ್ಕಿಯ ಶ್ರೀದೇವಿ ಸಭಾಭವನ ದಲ್ಲಿ ಬಹಳ ಸಂಭ್ರಮದಿಂದ ಅಂಟಿ ಡೊಂಜಿ ದಿನ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಹಬ್ಬವನ್ನು ಆಚರಿಸಲು ನಿರ್ಧರಿಸಿದೆ ಎಂದು ಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ ಕೆ. ಹೇಳಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಸುಮಾರು ಒಂದು ಸಾವಿರ ವಿಪ್ರರು ಅಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮ 8:30ಕ್ಕೆ ಪ್ರಾರಂಭಗೊಂಡು ಅಪರಾಹ್ನ 2 ಗಂಟೆಗೆ ಆಟಿದ ವಿಶೇಷ ಭೋಜನದೊಂದಿಗೆ ಕೊನೆಗೊಳ್ಳಲಿದೆ ಎಂದರು.
ಈ ನಡುವೆ ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ವಲಯದ ವಿಪ್ರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಲಯಗಳು ಪ್ರಾಯೋಜಿಸಿದ 60ಕ್ಕೂ ಮಿಕ್ಕಿ ಖಾದ್ಯಗಳ ಮೂಲಕ ಸಹ-ಭೋಜನ ನಡೆಯಲಿದೆ ಎಂದರು.
ಬೆಳಗ್ಗೆ 9:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕೆ ರಾವ್, ಮುನಿಯಾವು ಆಯೇರ್ವದಿಕ್ ಕಾಲೇಜಿನ ಪ್ರೊ. ಹೆರ್ಗ ಹರಿಪ್ರಸಾದ್ ಭಟ್ ಅಲ್ಲದೇ ಮಾಜಿ ಶಾಸಕ ಕೆ.ರಘುಪತಿ ಭಟ್, ರಮೇಶ್ ಬೀಡು, ನಗರಸಭಾ ಸದಸ್ಯ ಕೃಷ್ಣ ರಾವ್ ಕೋಡಂಚ, ಚಿತ್ರ ನಟಿ ರಾಧಿಕಾ ನಾರಾಯಣ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ದುರ್ಗಾಪ್ರಸಾದ್ ಭಾರ್ಗವ್, ಕೋಶಾಧಿಕಾರಿ ಹಯವದನ ಭಟ್ ವೈ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕನ್ನರಪಾಡಿ ವಲಯದ ರಾಜೇಂದ್ರ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.







