ಆ.15: ಕಲ್ಮಾಡಿ ವೆಲಂಕಣಿ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವ

ಉಡುಪಿ, ಆ.4: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆ.15ರಂದು ಜರಗಲಿದೆ.
ಈ ಬಾರಿಯ ಹಬ್ಬದ ಸಂದೇಶ ‘ಆತ ಹೇಳಿದಂತೆ ಮಾಡಿ’ ಎಂಬುದಾಗಿದ್ದು, ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಭತ್ತು ದಿನಗಳ ನವೇನಾ ಪ್ರಾರ್ಥನೆಗಳು ಆ.6ರಿಂದ 14ರ ವರೆಗೆ ನಡೆಯಲಿದೆ.
ಆ.6ರಂದು ಸಂಜೆ 3.45ಕ್ಕೆ ಸರಿಯಾಗಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ನವೇನಾ ಪ್ರಾರ್ಥನೆಗಳಿಗೆ ಚಾಲನೆ ನೀಡಲಿರುವರು. 9 ದಿನಗಳ ನೊವೆನಾ ಕಾರ್ಯಕ್ರಮದಲ್ಲಿ ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕ್ರೈಸ್ತ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕ್ರೈಸ್ತ ವಿಶ್ವಾಸಿಗಳು, ದಾನಿಗಳು, ಮದುವೆಯಾದ ದಂಪತಿಗಳು, ಮಕ್ಕಳು ಹಾಗೂ ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
ಆ.13ರಂದು ಮಧ್ಯಾಹ್ನ 2.54 ಕ್ಕೆ ಆದಿಉಡುಪಿ ಜಂಕ್ಷನ್‌ನಿಂದ ಚರ್ಚಿನ ತನಕ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದ್ದು ಶಿವಮೊಗ್ಗ ಧರ್ಮಪ್ರಾಂತ್ಯದ ವಂ.ಫ್ರಾಂಕ್ಲಿನ್ ಡಿಸೋಜ ಚಾಲನೆ ನೀಡಲಿದ್ದಾರೆ. ಆಗಸ್ಟ್ 15ರ ಬೆಳಗ್ಗೆ 10.30 ಕ್ಕೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ನೆರೆವೇರಿಸುವರು. ಅಂದು ಬೆಳಗ್ಗೆ 7.30 ಹಾಗೂ ಸಂಜೆ 4ಕ್ಕೆ ಕೊಂಕಣಿ ಭಾಷೆಯಲ್ಲಿ, ಮಧ್ಯಾಹ್ನ 2 ಗಂಟೆಗೆ ಕನ್ನಡ ಹಾಗೂ 6 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿದೆ ಎಂದು ಪುಣ್ಯಕ್ಷೇತ್ರದ ರೆಕ್ಟರ್ ವಂ.ಬ್ಯಾಪ್ಟಿಸ್ ಮಿನೇಜಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






