15 ಕೋ. ರೂ. ವೆಚ್ಚದ ʼಮರವಂತೆ ಬಂದರುʼ ಕಾಮಗಾರಿ ಮಾರ್ಚ್ ನೊಳಗೆ ಪೂರ್ಣ: ಸಂಸದ ಬಿ.ವೈ.ರಾಘವೇಂದ್ರ

ಕುಂದಾಪುರ, ನ.25: ಮರವಂತೆಯ ಮೀನುಗಾರಿಕಾ ಹೊರ ಬಂದರಿನಲ್ಲಿ ನಡೆಯುತ್ತಿರುವ ಎರಡನೇ ಹಂತದ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದು, ಮುಂಬರುವ ಮಾರ್ಚ್ ನೊಳಗೆ 15 ಕೋ. ರೂ. ವೆಚ್ಚದ ಕಾಮಗಾರಿಯ ಪ್ರಗತಿ ಆಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸೋಮವಾರ ಮರವಂತೆ ಹೊರಬಂದರಿನ ಎರಡನೇ ಹಂತದ ಕಾಮಗಾರಿ, ತ್ರಾಸಿ ಬೀಚ್ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತಿದ್ದರು.
ಮರವಂತೆ ಹೊರಬಂದರಿನಲ್ಲಿ ಬಿಜೆಪಿ ಸರಕಾರವಿದ್ದಾಗ ಮೊದಲ ಹಂತದಲ್ಲಿ 45 ಕೋಟಿ ರೂ. ವೆಚ್ಚದ ಕಾಮಗಾರಿ ಆಗಿತ್ತು. ಆ ಬಳಿಕ ಎರಡನೇ ಹಂತಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 85 ಕೋಟಿ ರೂ. ಅನುದಾನವನ್ನು ಘೋಷಿಸಿದ್ದರು. ಈ ಸರಕಾರ ಆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾಮಗಾರಿ ನಡೆಯುತ್ತಿದೆ ಎಂದವರು ತಿಳಿಸಿದರು.
ತ್ರಾಸಿ ಬೀಚ್ ನಲ್ಲಿ ಪ್ರಸ್ತುತ ನಡೆಯುತ್ತಿರುವ 9.95 ಕೋ. ರೂ. ವೆಚ್ಚದ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ಇಲ್ಲಿ ಉಪ್ಪುನೀರಿನ ಪ್ರಭಾವ ಜಾಸ್ತಿಯಿದ್ದು, ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ. ಗುಣಮಟ್ಟದ ಪೀಠೋಪಕರಣಗಳನ್ನು ಬಳಸುವಂತೆ ಸೂಚಿಸಿದರು.
ಸಿಆರ್‌ಝಡ್ ಬಾಕಿ ಇರುವುದನ್ನು ಬಿಟ್ಟು, ಅನುಮತಿ ಸಿಕ್ಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲಿ ಪ್ರತಿ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಮಳೆ- ಬಿಸಿಲಿಗೆ ಕುಳಿತುಕೊಳ್ಳುವ ಶೆಲ್ಟರ್ ನಂತಹ ವ್ಯವಸ್ಥೆಯಿಲ್ಲ. ಅದನ್ನು ಕೂಡ ಈ ಕಾಮಗಾರಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸಂಸದರು ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಬಸ್ ನಿಲ್ದಾಣ ಉದ್ಘಾಟನೆ :
ಸಂಸದರ ಅನುದಾನದಡಿ ಮಂಜೂರಾದ ತ್ರಾಸಿ ಬೀಚ್ ಬಳಿಯ ನೂತನವಾಗಿ ನಿರ್ಮಾಣವಾದ ನೂತನ ಬಸ್ ನಿಲ್ದಾಣವನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿ, ತ್ರಾಸಿ ಜಂಕ್ಷನ್ ಅಭಿವೃದ್ಧಿ, ಫ್ಲೈಓವರ್ಗೆ ಸುಮಾರು 20 ಕೋ.ರೂ. ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ವಿಭಾಗದ ಪಿಡಿ ಶಿವಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ಸುರೇಶ್ ಬಟವಾಡಿ, ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ, ಪ್ರಮುಖರಾದ ಶರತ್ ಶೆಟ್ಟಿ, ಕರಣ್ ಪೂಜಾರಿ, ಗೋಪಾಲ್ ವಸ್ರೆ, ರವೀಂದ್ರ ಖಾರ್ವಿ, ರವಿ ಶೆಟ್ಟಿರ್ಗಾ, ಅಂಥೋನಿ ಡಿಸೋಜಾ, ಪಾಂಡುರಂಗ ದೇವಾಡಿಗ, ಪ್ರವಾಸೋದ್ಯಮ ಇಲಾಖೆಯ ಮುತ್ತುರಾಜ್, ಗುತ್ತಿಗೆದಾರ ಅರ್ಜುನ್ ಹೆಗ್ಡೆ, ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು, ಎಂಜಿನಿಯರ್, ಮರವಂತೆಯ ಮೀನುಗಾರ ಮುಖಂಡರು, ಮೀನು ಗಾರರು ಉಪಸ್ಥಿತರಿದ್ದರು.







