ಆ.28ರ ‘ಚಲೋ ಬೆಳ್ತಂಗಡಿ’ ಧರಣಿಯಲ್ಲಿ 15 ಸಾವಿರ ಮಂದಿ ನಿರೀಕ್ಷೆ: ಬಿ.ಎಂ.ಭಟ್

ಉಡುಪಿ, ಆ.19: ಸೌಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ ನೈಜ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯದ ಜನಪರ ಸಂಘಟನೆ ಗಳು ಹಾಗೂ ರಾಜ್ಯದ ಹಲವು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆ.28ರಂದು ಹಮ್ಮಿಕೊಳ್ಳಲಾಗಿರುವ ಚಲೋ ಬೆಳ್ತಂಗಡಿ ಮಹಾಧರಣಿಯಲ್ಲಿ ರಾಜ್ಯದ 31 ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸುಮಾರು 15ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ. ಜಿಲ್ಲಾ ಸಂಚಾಲಕ, ವಕೀಲ ಬಿ.ಎಂ.ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಗಂಟೆಗೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಮಹಾಧರಣಿ ಸಮಾವೇಶ ನಡೆಯಲಿದೆ. ಉಡುಪಿ ಜಿಲ್ಲೆಯಿಂದ ಸಾವಿರಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತರ ನಡೆದಿರುವ ಅನುಮಾನಗಳನ್ನು ಬಲಗೊಳಿಸಿದೆ. ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಜನತೆ ಸಿಬಿಐ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಇತಿಹಾಸ ದಲ್ಲೇ ಮೊದಲ ಬಾರಿಗೆ ಜನತೆ ಸಿಬಿಐ ಬದಲು ರಾಜ್ಯದ ಪೊಲೀಸ್ ಇಲಾಖೆಯ ವಿಶೇಷ ತನಿಕಾ ತಂಡಕ್ಕೆ ಈ ಪ್ರಕರಣವನ್ನು ವಹಿಸಿಕೊಂಡುವಂತೆ ಒತ್ತಾಯಿಸುತ್ತಿದ್ದಾರೆ. ಆದುದರಿಂದ ರಾಜ್ಯ ಸರಕಾರ ಈ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಅದೇ ರೀತಿ ಧರ್ಮಸ್ಥಳ, ಉಜಿರೆ ಭಾಗದಲ್ಲಿ ದಶಕಗಳಿಂದ ನೂರಾರು ಅಸಹಜ ಸಾವುಗಳು ಸಂಭವಿಸಿದ್ದು, ಕೆಲವೊಂದು ಕೊಲೆಗಳು ಪತ್ತೆಯಾಗದೆ ಮುಚ್ಚಿ ಹೋಗಿವೆ. ಈ ಮಾಹಿತಿ ಜನತೆಯಲ್ಲಿ ಭೀತಿಗೆ ಕಾರಣವಾಗಿದೆ. ಆದುದರಿಂದ ಈ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ಉಡುಪಿ ಜಿಲ್ಲಾ ಮುಖಂಡರಾದ ಜಯನ್ ಮಲ್ಪೆ, ಬಾಲಕೃಷ್ಣ ಶೆಟ್ಟಿ, ಶಶಿಧರ್ ಗೊಲ್ಲ, ಕವಿರಾಜ್ ಉಪಸ್ಥಿತರಿದ್ದರು.







