ನ.16ರಿಂದ ಡಿ.28: 17ನೇ ವರ್ಷದ ಕಿಶೋರ ಯಕ್ಷಗಾನ ಸಂಭ್ರಮ

ಉಡುಪಿ, ನ.14: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಕಳೆದ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿ ಗಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ-2026’ ಈ ವರ್ಷ ನವೆಂಬರ್ 16ರಿಂದ ಡಿಸೆಂಬರ್ 28ರವರೆಗೆ ಜರಗಲಿದೆ ಎಂದು ಯಕ್ಷ ಶಿಕ್ಷಣ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಹೆಬ್ರಿ ತಾಲೂಕನ್ನು ಹೊರತು ಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕುಗಳಲ್ಲಿ ಈ ಬಾರಿಯ ಕಿಶೋರ ಯಕ್ಷ ಸಂಭ್ರಮ ನಡೆಯಲಿದೆ. ಪರ್ಯಾಯ ಶ್ರೀ ಶೀರೂರು ಮಠ, ಯಕ್ಷಗಾನ ಕಲಾರಂಗ ಉಡುಪಿ ಹಾಗೂ ವಿವಿದೆಡೆಗಳಲ್ಲಿ ಪ್ರದರ್ಶನದ ಸಂಘಟನಾ ಸಮಿತಿಗಳ ಸಹಕಾರದೊಂದಿಗೆ ಈ ಬಾರಿಯ ಕಿಶೋರ ಸಂಭ್ರಮ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ನವೆಂಬರ್ 16ರ ಸೋಮವಾರ ಸಂಜೆ 6:30ಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ವಿವಿಧ ಗಣ್ಯರ ಸಮಕ್ಷಮದಲ್ಲಿ ಈ ಬಾರಿಯ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ವ್ಯಾಪ್ತಿಯ ಒಟ್ಟು 99 ಪ್ರೌಢಶಾಲೆಗಳಲ್ಲಿ 41 ಗುರುಗಳಿಂದ ನಡೆಸಲಾಗುತ್ತಿರುವ ಯಕ್ಷಗಾನ ತರಬೇತಿಯ ಪ್ರದರ್ಶನಗಳು ‘ಕಿಶೋರ ಯಕ್ಷಗಾನ ಸಂಭ್ರಮ - 2026’ರ ಅಡಿಯಲ್ಲಿ ಒಟ್ಟು ಹನ್ನೊಂದು ಆಯ್ದ ಸ್ಥಳಗಳಲ್ಲಿ ಯಕ್ಷಗಾನ ಕಲಾರಂಗದ ಸಂಯೋಜನೆಯಲ್ಲಿ ಪ್ರಸ್ತುತಿಗೊಳ್ಳಲಿವೆ.
ಉಡುಪಿಯ 24ಪ್ರದರ್ಶನಗಳು ಪರ್ಯಾಯ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಮತ್ತು ಆಯಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ ಹಾಗೂ ಪ್ರದರ್ಶನ ಸಂಘಟನಾ ಸಮಿತಿಗಳ ಸಹಕಾರದೊಂದಿಗೆ ನಡೆಯಲಿದೆ. ಸುಮಾರು 3500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಬಣ್ಣ ಹಾಕಿ ರಂಗಸ್ಥಳದಲ್ಲಿ ಕುಣಿಯಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರದಲ್ಲಿ ಅಲ್ಲಿನ ಬಂಟರ ಭವನದ ಮುಂಭಾಗದಲ್ಲಿ ನವೆಂಬರ್ 16ರಿಂದ 22ರವರೆಗೆ ಪ್ರತಿದಿನ ಸಂಜೆ 5:00ರಿಂದ ತಲಾ ಎರಡರಂತೆ ಒಟ್ಟು 14 ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ ಪ್ರದರ್ಶನ ನೀಡಲಿವೆ.
ಕಾಪು ವಿಧಾನಸಭಾ ವ್ಯಾಪ್ತಿಯಲ್ಲಿ ನ.23ರಿಂದ 25ರವರೆಗೆ ಶಿರ್ವದ ಮಹಿಳಾ ಸೌಧದಲ್ಲಿ 5 ಶಾಲಾ ತಂಡಗಳು ಪ್ರದರ್ಶನ ನೀಡಿದರೆ, ನ.26 ಮತ್ತು 27ರಂದು ನಾಲ್ಕು ಶಾಲಾ ತಂಡಗಳು ಹಿರಿಯಡಕದ ಮಹತೋಭಾರ ಶ್ರೀವೀರಭದ್ರ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶಿಸಲಿವೆ. ಡಿಸೆಂಬರ್ 2ರಿಂದ 5ರವರೆಗೆ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎಂಟು ಶಾಲೆಗಳ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿವೆ.
ಡಿಸೆಂಬರ್ 2ರಿಂದ 26ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಉಡುಪಿ ಕ್ಷೇತ್ರದ 24 ಶಾಲಾ ತಂಡಗಳು ಪ್ರತಿದಿನ ಸಂಜೆ 4:00ರಿಂದ 5:30ರವರೆಗೆ ತಮ್ಮ ಪ್ರದರ್ಶನವನ್ನು ನೀಡಲಿವೆ.
ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಡಿಸೆಂಬರ್ 6ರಿಂದ 12ರವರೆಗೆ 10 ಶಾಲೆಗಳ ಮಕ್ಕಳ ತಂಡಗಳು ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ಪ್ರದರ್ಶನ ನೀಡಿದರೆ, ಡಿ.11ರಿಂದ 14ರವರೆಗೆ ಒಟ್ಟು ಏಳು ಪ್ರೌಢ ಶಾಲಾ ತಂಡಗಳು ಬಿದ್ಕಲ್‌ಕಟ್ಟೆಯ ಹಾರ್ದಳ್ಳಿ- ಮಂಡಳ್ಳಿ ಗ್ರಾಮಪಂಚಾಯತ್ ವಠಾರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿವೆ. ಅದೇ ರೀತಿ ಡಿ.15ರಿಂದ 18ರವರೆಗೆ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುಂದಾಪುರ ಆಸುಪಾಸಿನ ಏಳು ಶಾಲಾ ತಂಡಗಳ ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.
ಕೊನೆಯದಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ಧಾಪುರದ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ಡಿ.19 ಮತ್ತು 20ರಂದು ಒಟ್ಟು ನಾಲ್ಕು ತಂಡಗಳು ಯಕ್ಷಗಾನ ಪ್ರದರ್ಶಿಸಿದರೆ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಪರಿಸರದಲ್ಲಿ ಡಿ.21ರಿಂದ 23ರವರೆಗೆ ಆರು ಶಾಲಾ ತಂಡಗಳು ಪ್ರದರ್ಶನ ನೀಡಲಿವೆ. ಡಿ.24ರಿಂದ 28ರವರೆಗೆ ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರದ 10 ಶಾಲೆಗಳ ಮಕ್ಕಳ ಯಕ್ಷಗಾನ ತಂಡಗಳು ತಮ್ಮ ಪ್ರದರ್ಶನವನ್ನು ನೀಡಲಿವೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.






