ಆಳ್ವಾಸ್ ಪ್ರಗತಿ-15ರಲ್ಲಿ 16,027 ಉದ್ಯೋಗಗಳು ಲಭ್ಯ

ಉಡುಪಿ, ಜು.28: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳದ 15ನೇ ಆವೃತ್ತಿ ಇದೇ ಆ.1 ಮತ್ತು 2ರಂದು ಮೂಡಬಿದರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಾರಿ ಒಟ್ಟು 302 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ವಿವಿಧ ವಲಯಗಳಲ್ಲಿ ವಿವಿಧ ವಿಷಯಗಳ ಒಟ್ಟು 16,027 ಉದ್ಯೋಗಗಳು ಯುವಜನತೆಗೆ ಲಭ್ಯವಿರಲಿವೆ ಎಂದರು.
ಆಳ್ವಾಸ್ ಪ್ರಗತಿ-2025ರಲ್ಲಿ ವಿವಿಧ ಕಂಪೆನಿಗಳು ಪದವೀಧರರು, ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಮ್ಯಾನೇಜ್‌ಮೆಂಟ್, ಬೇಸಿಕ್ ಸಾಯನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ, ಪಿಯುಸಿ ಹಾಗೂ ಎಸೆಸೆಲ್ಸಿ ಯ ಅರ್ಹ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ, ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ಪ್ರಸಾದ್ ಶೆಟ್ಟಿ ತಿಳಿಸಿದರು.
ಈವರೆಗಿನ ಅಂದಾಜಿನಂತೆ 15ನೇ ಆಳ್ವಾಸ್ ಪ್ರಗತಿ ಮೇಳದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯವರಿಗೆ 3012 ಉದ್ಯೋಗಗಳು ಲಭ್ಯವಿದ್ದರೆ, ಐಟಿಐ ಮತ್ತು ಡಿಪ್ಲೋಮಾದಾರರಿಗೆ-4350, ಯಾವುದೇ ಪದವೀಧ ರರಿಗೆ-3847, ಬಿಇ/ಬಿಟೆಕ್-805, ಐಟಿಯವರಿಗೆ 119, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್‌ಗೆ-709, ಯಾವುದೇ ಸ್ನಾತಕೋತ್ತರ ಪದವಿ, ಎಂಬಿಎ-1446, ಬಿಕಾಂ ಹಾಗೂ ಬಿಬಿಎ-1176, ಗಲ್ಫ್ ರಾಷ್ಟ್ರ ಗಳಿಗೆ-316 ಉದ್ಯೋಗಾವಕಾಶಗಳು ಅರ್ಹರಿಗೆ ಲಭ್ಯವಿರುವುದಾಗಿ ಅವರು ಹೇಳಿದರು.
ಕಳೆದ ಬಾರಿ 258 ಕಂಪೆನಿಗಳು ಭಾಗವಹಿಸಿದ್ದರೆ ಈ ಬಾರಿ 302 ಕಂಪೆನಿಗಳ ನೊಂದಾವಣಿಯನ್ನು ಈಗಾಗಲೇ ಖಾತ್ರಿ ಪಡಿಸಲಾಗಿದೆ. ಇವುಗಳಲ್ಲಿ ಫ್ಲಿಪ್‌ಕಾರ್ಟ್, ಅಮೆಝಾನ್, ವೋಲ್ವೊ ಗ್ರೂಪ್, ಜುಬಿಲಿಯಂಟ್ ಫಾರ್ಮೋವಾ ಇನ್‌ಫೋಸಿಸ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್, ಎಎನ್‌ಝಡ್, ಒರ್ಯಾಕಲ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ ಮುಂತಾದವು ಸೇರಿವೆ ಎಂದರು.
ಈ ಬಾರಿಯ ಮೇಳದಲ್ಲಿ ಒಟ್ಟು 13 ವಲಯಗಳ ಉದ್ಯೋಗದಾತರು ತಮಗೆ ಬೇಕಾದ ಅರ್ಹ ಉದ್ಯೋ ಗಾಕಾಂಕ್ಷಿಗಳನ್ನು ಆಯ್ಕೆ ಮಾಡಲಿದ್ದಾರೆ. ಇವುಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ ವಲಯ, ಐಟಿಇಎಸ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಕನ್‌ಸ್ಪ್ರಕ್ಷನ್ ವಲಯ, ಶಿಕ್ಷಣ ಮತ್ತು ಎನ್ಜಿಒ ವಲಯಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ ಎಂದರು.
ಕಳೆದ ಬಾರಿ 15,000 ಮಂದಿ ಉದ್ಯೋಗಾಕಾಂಕ್ಷಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 2568 ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ಲಭಿಸಿದ್ದರೆ, 5442 ಮಂದಿಯನ್ನು ಆಯಾ ಕಂಪೆನಿಗಳು ಶಾರ್ಟ್ ಲಿಸ್ಟ್ ಮಾಡಿದ್ದವು. ಈ ಬಾರಿ 15 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳನ್ನು ನಿರೀಕ್ಷಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಕಲರ್‌ಕೋಡಿಂಗ್ ಬ್ಯಾಡ್ಜ್‌ನ್ನು ನೀಡಲಾಗುತ್ತದೆ. ಇದರ ಮೂಲಕ ಸುಲಭದಲ್ಲಿ ಬೇಕಾದ ಅಭ್ಯರ್ಥಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಎಸೆಸೆಲ್ಸಿ-ಪಿಯುಸಿಯವರಿಗೆ ಕೆಂಪು, ಮೆಡಿಕಲ್, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್‌ಗೆ ಬಿಳಿ, ಸ್ನಾತಕ ಪದವಿಗೆ ಹಳದಿ, ಇಂಜಿನಿಯರಿಂಗ್‌ಗೆ ಬೂದು ಬಣ್ಣದ ಬ್ಯಾಡ್ಜ್ ಇರುತ್ತದೆ ಎಂದರು.
ಐಟಿಐ, ಪಿಯುಸಿ ಮತ್ತು ಎಸೆಸೆಲ್ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ ಎಂದ ಪ್ರಸಾದ್ ಶೆಟ್ಟಿ, ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ವೆಬ್‌ಸೈಟ್- www.alvaspragati.com- ನ್ನು ನೋಡಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.







