ಸೆ.17: ಎಂ.ಎಸ್.ಎಂ.ಇ ಮಾಹಿತಿ ಕಾರ್ಯಾಗಾರ
ಉಡುಪಿ, ಸೆ.15: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್‌ಎಂಇ)ಗಳ ಕಾರ್ಯಕ್ಷಮತೆ ಯನ್ನು ಹೆಚ್ಚಿಸಲು ಹಾಗೂ ಅವುಗಳ ಕಾರ್ಯಚಟುವಟಿಕೆಗಳನ್ನು ವೇಗಗೊಳಿಸಲು ಭಾರತ ಸರಕಾರದ ಎಂಎಸ್‌ಎಂಇ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗವರ್ಧಕ (ಆರ್‌ಎಎಂಪಿ) ಯೋಜನೆಯಡಿಯಲ್ಲಿ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಬೆಂಗಳೂರು ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಎಂಎಸ್‌ಎಂಇಗೆ ಸಂಬಂಧಿಸಿದಂತೆ ಮಾಹಿತಿ ಕಾರ್ಯಗಾರವನ್ನು ಸೆ.17 ರಂದು ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಾಗಾರವು ಬೆಳಗ್ಗೆ 10ರಿಂದ ಅಪರಾಹ್ನ 1:30ರವರೆಗೆ ಹಾಗೂ ಅಪರಾಹ್ನ 2:30ರಿಂದ 5 ಗಂಟೆಯವರೆಗೆ ನಡೆಯಲಿದೆ. ಕಾರ್ಯಾಗಾರ ದಲ್ಲಿ ಪ್ರತಿಷ್ಟಿತ ಸಂಸ್ಥೆಗಳಿಂದ ಆಗಮಿಸಿದ ತಜ್ಞರು ಹಾಗೂ ಪರಿಣಿತರು ಎಂ.ಎಸ್.ಎಂ.ಇ ಉದ್ಯಮಶೀಲರಿಗೆ ಉಪಯುಕ್ತ ಮಾಹಿತಿಯನ್ನು ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನೋಂದಾಯಿತ ಎಂ.ಎಸ್.ಎಂ.ಇ ಉದ್ಯಮಶೀಲರಿಗೆ ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಂ.ಎಸ್.ಎಂ.ಇ ಉದ್ಯಮಶೀಲರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ದೂರವಾಣಿ ಸಂಖ್ಯೆ: 0820-2575650 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







