ಅ.17 ಮತ್ತು 18ರಂದು ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಮೇಳ-2026

ಉಡುಪಿ, ಅ.16: ಕರಾವಳಿ ಮತ್ತು ಮಲೆನಾಡು ಭಾಗದ ಜನಪ್ರಿಯ ಕೃಷಿ ಮೇಳವಾದ ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕಾ ಮೇಳ-2026 ಅ.17 ಮತ್ತು 18ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯಲಿದೆ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ರೇವಣ್ಣ ರೇವಣ್ಣಕರ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಸೇರಿದಂತೆ ವಿವಿಧ ಕೃಷಿ ಸಂಘಟನೆಗಳ ಸಹಯೋಗದೊಂದಿಗೆ ಎರಡು ದಿನಗಳ ಈ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದರು.
ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸುವುದು, ಕರಾವಳಿ ಕರ್ನಾಟಕದ ಕೃಷಿ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಒದಗಿಸುವುದು ಹಾಗೂ ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸುವುದು ಈ ಕೃಷಿ ಮೇಳದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ರೈತರಿಗೆ ಅವಶ್ಯವಿರುವ ಕೃಷಿ ಚಟುವಟಿಕೆಗಳ ಪರಿಕರಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನೆ: ಶನಿವಾರ ಬೆಳಗ್ಗೆ 10:30ಕ್ಕೆ ಕೃಷಿ ಮೇಳವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಝ್ವಾನ್ ಅರ್ಷದ್ ಉದ್ಘಾಟಿಸಲಿದ್ದಾರೆ. ಕೃಷಿಮೇಳದ ಮಳಿಗೆಗಳನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಮ್.ವಿ. ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಕೃಷಿಗೆ ಸಂಬಂಧಿತ ವಿವಿಧ ಸರ್ಕಾರಿ ಇಲಾಖೆಗಳ ಗಣ್ಯರು, ರೈತ ಸಮೂಹಗಳ ಪದಾಧಿಕಾರಿ ಗಳು, ವಿವಿಯ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಸಲಿದ್ದಾರೆ.
ಕೃಷಿ ಮೇಳದಲ್ಲಿ ಹಲವು ಆಕರ್ಷಣೆಗಳಿದ್ದು, ಭತ್ತದ ಬಿಡುಗಡೆಯಾದ ತಳಿಗಳು ಮತ್ತು ಭತ್ತದ ಜರ್ಮ್ಪ್ಲಾಸಂ (ಅನುವಂಶಿಕ ಸಂಪನ್ಮೂಲ), ಭತ್ತದ ಬಿಜೋತ್ಪಾದನೆ ತಾಕುಗಳು, ವಿವಿಧ ತಳಿಗಳ ಅಡಿಕೆ, ತೆಂಗು, ಗೋಡಂಬಿ, ಮಾವು ಮತ್ತು ರಬ್ಬರ್ ಬೆಳೆಯ ಪ್ರಾತ್ಯಕ್ಷಿಕೆ ತಾಕುಗಳು, ತೆಂಗಿನ ತೋಟದಲ್ಲಿ ಚಕ್ಕೆ ಅಂತರ ಬೆಳೆಯಾಗಿ ಪ್ರಾತ್ಯಕ್ಷಿಕೆ ನೋಡಬಹುದು. ಮೀನುಸಾಕಾಣಿಕೆ ಕೊಳಗಳು, ಮಧುವನ (ಜೇನುಸಾಕಾಣಿಕೆ), ಎರೆಹುಳು ಗೊಬ್ಬರ ಉತ್ಪಾದನೆ, ಹೈನುಗಾರಿಕೆ, ಕೋಳಿ ಸಾಕಣೆ, ಕುರಿಸಾಕಣೆ, ಹಂದಿ ಸಾಕಣೆ, ಚಿಟ್ಟೆ ಉದ್ಯಾನವನ, ತೋಟಗಾರಿಕೆ ನರ್ಸರಿ ಮತ್ತು ಡ್ರೋನ್ ಬಳಕೆಯ ಮಹತ್ವ, ನೀರಿನ ಅಭಾವದ ಸಂದರ್ಭದಲ್ಲಿ ತುಂತುರು/ಹನಿ ನೀರಾವರಿ ಪದ್ದತಿಗಳ ಪ್ರಾತ್ಯಕ್ಷಿಕೆಯನ್ನು ಇಲ್ಲಿ ನೋಡಬಹುದು ಎಂದು ಡಾ.ರೇವಣ್ಣವರ ತಿಳಿಸಿದರು.
ಕೃಷಿ ಪ್ರದರ್ಶನದಲ್ಲಿ 150ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣ ಗಳು, ಬೀಜಗಳು, ಸಸಿಗಳ ಪ್ರದರ್ಶನ ಹಾಗೂ ಮಾರಾಟದ ಅವಕಾಶ ಕಲ್ಪಿಸಲಾಗುತ್ತದೆ.ಜೈವಿಕ ತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ಬಂಗಾರ ಹುಳುನ ಉತ್ಪಾದನೆ ಹಾಗೂ ಅವುಗಳಿಂದ ಶೀಘ್ರ ವಾಗಿ ಉತ್ಪಾದನೆ ಯಾಗುವ ಶ್ರೇಷ್ಠಮಟ್ಟದ ಸಾವಯವ ಗೊಬ್ಬರದ ಉತ್ಪಾದನೆ ತಂತ್ರಜ್ಞಾನದ ಪ್ರದರ್ಶನವೂ ಇರಲಿದೆ ಎಂದರು.
ಎರಡು ದಿನಗಳ ಮೇಳದಲ್ಲಿ ನಾಲ್ಕು ವಿಶೇಷ ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ರೈತ ಉತ್ಪಾದಕ ಕಂಪನಿಗಳ (ಎಫ್ಪಿಓ) ಸವಾಲು ಗಳು-ಪರಿಹಾರಗಳು ಮತ್ತು ರೈತ-ವಿಜ್ಞಾನಿಗಳ ನೇರ ಸಂವಾದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಈ ಮೇಳಕ್ಕೆ ಪ್ರವೇಶ ಉಚಿತವಾಗಿದೆ ಎಂದರು.
ಈ ಮೇಳಕ್ಕೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ರೈತರು ಹಾಗೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಆಗಮಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರವಿರಾಜ ಶೆಟ್ಟಿ, ಮಾಜಿ ಪ್ರಾಂಶುಪಾಲ ಡಾ.ಸುಧೀರ್ ಕಾಮತ್, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ನವೀನ್ ಎನ್.ಈ, ಡಾ.ಎಚ್.ಎಸ್.ಚೈತನ್ಯ, ಡಾ.ಎಚ್.ಆರ್.ಭೂಮಿಕಾ, ಮೋಹನ ಕುಮಾರ್ ಮುಂತಾದವರಿದ್ದರು.






