ಶರಣಾದ ನಕ್ಸಲ್ ಲಕ್ಷ್ಮೀಗೆ ಫೆ.17ರವರೆಗೆ ನ್ಯಾಯಾಂಗ ಬಂಧನ

ಲಕ್ಷ್ಮೀ
ಕುಂದಾಪುರ, ಫೆ.3: ಉಡುಪಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲ್, ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗುಡ್ಡೆಯ ಲಕ್ಷ್ಮೀ(41) ಅವರಿಗೆ ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಇಂದು ಆದೇಶ ನೀಡಿದೆ.
ರವಿವಾರ ಲಕ್ಷ್ಮೀ ಅವರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು, ಆಕೆಯನ್ನು ಕುಂದಾಪುರ ನ್ಯಾಯಾಧೀಶರ ನಿವಾಸದ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಿದರು.
ಮಂಗಳೂರಿನ ಜೈಲಿನಲ್ಲಿರುವ ಆಕೆಯನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾ ಯಿತು. ನ್ಯಾಯಾಧೀಶೆ ರೋಹಿಣಿ, ಲಕ್ಷ್ಮೀ ಅವರಿಗೆ ಫೆ.17ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು.
ಕುಂದಾಪುರ ಉಪವಿಭಾಗದ ಮೂರು ಪ್ರಕರಣಗಳ ಸಲುವಾಗಿ ಈ ವಾರಾಂತ್ಯದಲ್ಲಿ ಪೊಲೀಸರು ಲಕ್ಷ್ಮೀಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿದೆ. ಡಿವೈಎಸ್ಪಿನೇತೃತ್ವದಲ್ಲಿ ಈ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.





