ಫೆ.18: ಸೇನಾಪುರ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ಸೇನಾಪುರ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆ ಯಲ್ಲಿ ಫೆ.೧೮ರಂದು ಅಪರಾಹ್ನ ೩ ಗಂಟೆಗೆ ಸೇನಾಪುರ ರೈಲು ನಿಲ್ದಾಣದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೇನಾಪುರ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿಯ ಸಂಚಾಲಕ ರಾಜೀವ ಪಡುಕೋಣೆ ತಿಳಿಸಿದ್ದಾರೆ.
ಹಲವಾರು ಗ್ರಾಮಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಎಲ್ಲಾ ಸೌಲಭ್ಯಗಳಿರುವ ಸೇನಾ ಪುರದ ರೈಲು ನಿಲ್ದಾಣದಲ್ಲಿ ಸ್ಥಳೀಯ ಪ್ರಯಾಣಿಕರಿಗೆ ಉಪಯೋಗವಾಗುವಂತೆ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡ ಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮೂರು ತಿಂಗಳಲ್ಲಿ ಖಚಿತ ಉತ್ತರ ನೀಡಬೇಕೆಂದು ಗಡುವು ನೀಡಲಾಗಿತ್ತು.
ಆದರೆ ಹೋರಾಟ ಸಮಿತಿ ನೀಡಿದ ಗಡುವು ಮೀರಿದ್ದು ಸಮರ್ಪಕ ಉತ್ತರ ಸಿಕ್ಕದ ಕಾರಣ ಸೇನಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಮೂಲಕ ಸ್ಪಷ್ಟ ಉತ್ತರ ಪಡೆಯಲು ಹಾಗೂ ಕೂಡಲೇ ಎಲ್ಲಾ ಎಕ್ ಪ್ರೆಸ್ ರೈಲು ನಿಲುಗಡೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ೧೫ ಗ್ರಾಮ ಪಂಚಾಯತ್ ವ್ಯಾಪ್ತಿಯ 24 ಗ್ರಾಮದಲ್ಲಿ ಈಗಾಗಲೇ ಪ್ರಚಾರ ನಡೆಸಲಾಗಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







