18ನೇ ವರ್ಷದ ಕೊರಗ ಭೂಮಿ ಹಬ್ಬ -ಅಭಿವೃದ್ಧಿ ವಿಚಾರ ಸಂಕಿರಣ

ಹೆಬ್ರಿ, ಆ.18: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ-ಕೇರಳ ಇದರ 18ನೇ ವರ್ಷದ ಭೂಮಿ ಹಬ್ಬ ಹಾಗೂ ಅಭಿವೃದ್ಧಿ ವಿಚಾರ ಸಂಕಿರಣ ಸೋಮವಾರ ಹೆಬ್ರಿ ಬಡಾಗುಡ್ಡೆಯ ಕೊರಗ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಐ.ಟಿ.ಡಿ.ಪಿ ಇಲಾಖೆ ಉಡುಪಿಯ ಯೋಜನಾ ಸಮನ್ವಯ ಅಧಿಕಾರಿ ಎಂ.ನಾರಾಯಣ ಸ್ವಾಮಿ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸಂಘಟನೆಯ ಮೂಲಕ ನೋಡಿ ಕೊಳ್ಳಬೇಕು. ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುನ್ನಲೆಗೆ ತಾವೆಲ್ಲರೂ ಬರಬೇಕು. ದುಶ್ಚಟ ಗಳಿಂದ ಅನೇಕರು ಭಾದಿತರಾಗಿ ಕುಟುಂಬಕ್ಕೆ ಹೊರೆಯಾಗಿದ್ದಾರೆ, ಅಂತವರನ್ನು ಸಂಘಟನೆ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊರಗ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ ಕರ್ನಾಟಕ ಕೇರಳ ಇದರ ಅಧ್ಯಕ್ಷೆ ಸುಶೀಲ ನಾಡ ಮಾತನಾಡಿ, ಸಮುದಾಯದ ವತಿಯಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಆಗಬೇಕು. ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಸರ್ಕಾರದಿಂದ ಸಿಗುವ ಸವಲತ್ತು ವಿನಿಯೋಗ ಆಗಲಿ. ಹೋರಾಟದ ಫಲವಾಗಿ ಇಂದು ಕನಿಷ್ಠ ಭೂಮಿ ನಮಗೆ ಸಿಕ್ಕಿದೆ ಎಂದರು.
ಹೆಬ್ರಿ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಬಡಾಗುಡ್ಡೆ ಕೊರಗ ಸಭಾಭವನಕ್ಕೆ ಸಾಗಿದ ಜಾಥಾವನ್ನು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್. ಬಂಗೇರ ಉದ್ಘಾಟಿಸಿದರು. ಧ್ವಜಾರೋಹಣವನ್ನು ಸಮುದಾಯದ ಮುಖಂಡ ಬೊಗ್ರ ಕೊರಗ ನೆರವೇರಿಸಿದರು.
ಸಾಂಸ್ಕೃತಿಕ ಅಭಿವ್ಯಕ್ತಿ, ಡೋಲು ವಾದನ, ಡೋಲು ಕುಣಿತ, ಹಾಡು ಪ್ರಹಸನ ನೃತ್ಯ ನಡೆಯಿತು. ಜಾಥಾದಲ್ಲಿ ಕೊರಗ ಸಮುದಾಯದ ವಿವಿಧ ಕಲಾತಂಡಗಳಿಂದ ವಿಶೇಷ ಆಕರ್ಷಣೆಯ ಡೋಲು, ಚಂಡೆ, ಕೊಳಲು ವಾದನ ಹಾಗೂ ಡೋಲು ಕುಣಿತ ಗಮನ ಸೆಳೆದವು. ಪ್ರಮುಖರಾದ ಉಷಾ, ಅಮ್ಮಣ್ಣಿ ಅಬ್ಲಿಕಟ್ಟೆ, ಕೆ.ಪುತ್ರನ್ ಹೆಬ್ರಿ ಉಪಸ್ಥಿತರಿದ್ದರು. ಸುಪ್ರಿಯಾ ಕಿನ್ನಿಗೋಳಿ ವಂದಿಸಿದರು. ವಿಮಲಾ ಕಾರ್ಯಕ್ರಮ ನಿರೂಪಿಸಿದರು.







