ಸೆ.18ರಂದು ಸಿಪಿಎಂ ಜಿಲ್ಲಾ ಸಮಿತಿಯಿಂದ ‘ಮಂಗಳೂರು ಚಲೋ’

ಉಡುಪಿ, ಸೆ.16: ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಜನರ ಹಕ್ಕೊತ್ತಾಯಗಳನ್ನು ಮಂಡಿಸುವ ಸಲುವಾಗಿ ‘ಸಿಪಿಎಂ ಮಂಗಳೂರು ಚಲೋ’ ಕಾರ್ಯಕ್ರಮವನ್ನು ಸೆ.18ರ ಶುಕ್ರವಾರ ಬೆಳಗ್ಗೆ ಹಮ್ಮಿಕ್ಕೊಳಲಾಗಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 7ಕ್ಕೆ ಬೈಂದೂರು, ಕುಂದಾಪುರ ಹಾಗೂ 8ಕ್ಕೆ ಉಡುಪಿಯಿಂದ ಆರಂಭಗೊಳ್ಳುವ ಮಂಗಳೂರು ಚಲೋ ಮಂಗಳೂರಿನ ನಾಗೋರಿ ಸರ್ಕಲ್‌ಗೆ ತೆರಳಲಿದೆ. ಬಳಿಕ ಅಲ್ಲಿ ಮಂಗಳೂರು ಸಮಿತಿಯೊಂದಿಗೆ ಸೇರಿ ಪ್ರಜಾಸೌಧದವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ಕರಾವಳಿಯ ಬೇಡಿಕೆಯ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸರಕಾರಿ ಶಾಲಾ-ಕಾಲೇಜುಗಳ ಬಲಪಡಿಸುವಿಕೆ, ಜಿಲ್ಲೆಯ ಪಿಪಿಪಿ ಮಾದರಿ ಬದಲಿಗೆ ಸಂಪೂರ್ಣವಾಗಿ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು, ಸರಕಾರಿ ಇಂಜಿನಿಯರಿಂಗ್ ಕಾಲೇಜು, ತಾಲೂಕು ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ, ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ಬಲವರ್ಧನೆ, ಹೊಸ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆ, ವಸತಿ, ನಿವೇಶನ ಬೇಡಿಕೆ ಈಡೇರಿಕೆ, ಆಲೂರು, ಹರ್ಕೂರು ಗ್ರಾಮಗಳ ಕೊರಗ ಕುಟುಂಬಗಳಿಗೆ ಹಕ್ಕುಪತ್ರ, ನಿರುದ್ಯೋಗ ಸಮಸ್ಯೆ ಕುರಿತು ಗಮನ, ಬ್ರಹ್ಮಾವರದಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ ಮುತುವರ್ಜಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್‌ಚೇತನ ಮುಂತಾದ ಬೇಡಿಕೆಗಳನ್ನು ಮಂಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಶಶಿಧರ ಗೊಲ್ಲ, ರಾಜೀವ ಪಡುಕೋಣೆ, ಚಂದ್ರಶೇಖರ ವಿ. ಉಪಸ್ಥಿತರಿದ್ದರು.






