ಸೆ.18ರಂದು ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಪ್ರಯುಕ್ತ ವಾಹನ ಸಂಚಾರ ಮಾರ್ಗ ಬದಲಾವಣೆ

ಉಡುಪಿ, ಸೆ.17:ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ಎದುರು ಸಾರ್ವಜನಿಕ ಗಣೇಶೋತ್ಸವ ಸೆ.18ರವರೆಗೆ ನಡೆಯಲಿದ್ದು, ಸೆ.18ರಂದು ಗಣೇಶಮೂರ್ತಿಯ ವಿಸರ್ಜನೆ ನಡೆಯಲಿದೆ. ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಸಾಗಿ ಬರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಆದ್ದರಿಂದ ಸೆ.18ರ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.
ರಾ.ಹೆದ್ದಾರಿ 169(ಎ)ಯಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್ ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಕಟ್ಟೆ-ಹರಿಖಂಡಿಗೆ-ಬೈರಂಪಳ್ಳಿ-ಪರ್ಡೂರು ಮೇಲ್ಪೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ, ಬಜೆ, ಕುಕ್ಕೆಹಳ್ಳಿ ಪೇತ್ರಿ ಮಾರ್ಗವಾಗಿ ಹೆಬ್ರಿ ಆಗುಂಬೆಗೆ ಸಂಚರಿಸಬಹುದು.
ರಾ.ಹೆದ್ದಾರಿ 169(ಎ)ಯಲ್ಲಿ ಆಗುಂಬೆ- ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪೇಟೆ- ಬೈರಂಪಳ್ಳಿ- ಹರಿಖಂಡಿಗೆ- ಕೋಟ್ನಾಕಟ್ಟೆ- ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು.
ರಾ.ಹೆದ್ದಾರಿ 169(ಎ)ಯಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ-ಬ್ರಹ್ಮಾವರ ಕಡೆಯ ವಾಹನಗಳಿಗೆ ಪೆರ್ಡೂರು ಮೇಲ್ಪೇಟೆಯ ಆರ್.ಎಸ್.ಎಸ್ ಬ್ಯಾಂಕ್ ಬಳಿ ಇರುವ ಅಲಂಗಾರು ರಸ್ತೆಯ ಮಾರ್ಗವಾಗಿ ಕರ್ಜೆ, ಪೇತ್ರಿ, ಬ್ರಹ್ಮಾವರ ಕಡೆ ಸಂಚರಿಸಬೇಕು.
ಸೆ.18ರ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪೆರ್ಡೂರು ಕೆಳಪೇಟೆಯಿಂದ-ಮೇಲ್ಪೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರ ಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






