ಜ.21: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆ ‘ವಿಂಶತಿ ಸಂಭ್ರಮ’
ಉಡುಪಿ, ಜ.15: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ 20ನೇ ವರ್ಷದ ‘ವಿಂಶತಿ ಸಂಭ್ರಮ’ ಜ.21ರಂದು ಮಧ್ಯಾಹ್ನ 2ಗಂಟೆಗೆ ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ವಿಂಶತಿ ಸಂಭ್ರಮದ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಣೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮವನ್ನು ಹಿರಿಯ ಸಾಹಿತಿ ನೆಂಪು ನರಸಿಂಹ ಭಟ್ ಉದ್ಘಾಟಿಸ ಲಿರುವರು. ಮಧ್ಯಾಹ್ನ 2.15ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ಯಕ್ಷಗಾನ ನೃತ್ಯ ರೂಪಕ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ವಹಿಸಲಿರುವರು ಎಂದರು.
ಉರಗ ತಜ್ಞ ಗುರುರಾಜ್ ಸನಿಲ್, ರಂಗ ಕಲಾವಿದ ಭಾಸ್ಕರ್ ಮಣಿಪಾಲ, ಹೊಸಬೆಳಕು ಸೇವಾ ಟ್ರಸ್ಟ್ ಕೌಡೂರು, ಬೈಲೂರು ಹಾಗೂ ಸ್ನೇಹ ಯೂತ್ ಕ್ಲಬ್ ಬಾಳ್ಕಟ್ಟ ಹಿರೇಬೆಟ್ಟು ಅವರನ್ನು ಸಮ್ಮಾನಿಸಲಾಗುವುದು. ಮೌನೇಶ್ ಆಚಾರ್ಯ ಪರ್ಕಳ ಅವರು ಬರೆದ ನೀರ್‌ದೋಸೆ ಹಾಸ್ಯ ತುಣುಕುಗಳ ಸಂಕಲನ ಬಿಡುಗಡೆಗೊಳ್ಳಲಿದೆ.
ಸಂಜೆ 6.15ಕ್ಕೆ ಹಾಸ್ಯ ಭಾಷಣಕಾರ ಮನು ಹಂದಾಡಿ ಅವರಿಂದ ನಗೆ ಹಬ್ಬ ಸ್ಟಾಂಡಪ್ ಕಾಮಿಡಿ ಶೋ ನಡೆಯಲಿದೆ. 7.15ಕ್ಕೆ ಗುರುವಸಂತಿ ಸಾಂಸ್ಕೃತಿಕ ವೇದಿಕೆ ಮಣಿಪಾಲದ ಕಲಾವಿದರಿಂದ ‘ಕಾದಿರುವಳು ಶಬರಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂದೀಪ್ ನಾಯ್ಕ್ ಕಬ್ಯಾಡಿ, ಗಣೇಶ್ ಸಣ್ಣಕ್ಕಿಬೆಟ್ಟು, ರಾಜೇಶ್ ನಾಯಕ್, ಗೋಪಿ ಹಿರೇಬೆಟ್ಟು ಹಾಜರಿದ್ದರು.







