ಫೆ.21ರಿಂದ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ
ಕುಂದಾಪುರ, ಫೆ.19: ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಹಾಗೂ ಧಾರವಾಡ ವಲಯ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘಗಳ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ ಫೆ.21ರಿಂದ 23ರವರೆಗೆ ಕುಂದಾಪುರದ ಭಂಡಾರ್‌ಕಾರ್ಸ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.
ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಇತಿಹಾಸ ಪರಿಷತ್ತಿನ ಸ್ಥಳೀಯ ಕಾರ್ಯದರ್ಶಿ ಗೋಪಾಲ ಕೆ. ಮಾತನಾಡಿ, ಫೆ.21ರ ಬೆಳಗ್ಗೆ 10ಗಂಟೆಗೆ ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದು, ಕಾಲೇಜಿನ ಹಿರಿಯ ವಿಶ್ವಸ್ಥ ಕೆ. ಶಾಂತರಾಮ ಪ್ರಭು ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿವಿ, ದಿಲ್ಲಿ ವಿವಿಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಕೇಶವನ್ ವೇಳುತಾಟ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಪುಸ್ತಕ ಬಿಡುಗಡೆ, ಸುಮಾರು 150 ಪ್ರಬಂಧ ಮಂಡನೆ, ದತ್ತಿನಿಧಿ ಉಪನ್ಯಾಸಗಳಲ್ಲಿ ತುಳುನಾಡಿನ ಬುಡಕಟ್ಟು ದೈವಗಳು, ಆಧುನಿಕ ಮುಖಾ ಮುಖಿ, ಉತ್ತರ ಕನ್ನಡ ಜಿಲ್ಲೆಯ ಶಾಸನಗಳು, ಫೆ.22ರಂದು ಬೆಳಗ್ಗೆ 10ಕ್ಕೆ ಕುದ್ಮಲ್ ರಂಗರಾವ್, ಸ್ವಾತಂತ್ರ್ಯ ಹೋರಾಟಗಾರ್ತಿ ಉಮಾಬಾಯಿ ಕುಂದಾಪುರ ಕುರಿತು ಉಪನ್ಯಾಸ ನಡೆಯಲಿದೆ.
ಫೆ.23ರ ಬೆಳಗ್ಗೆ 10ಗಂಟೆಗೆ ಅವಿಭಜಿತ ದ.ಕ. ಜಿಲ್ಲೆಯ ಇತಿಹಾಸ - ಸಂಸ್ಕೃತಿ ಚಿಂತನಾ- ಮಂಥನದಲ್ಲಿ ಉಪನ್ಯಾಸ ನಡೆಯಲಿದೆ. ಮಂಗಳೂರು ವಿವಿ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಕೆ.ಎಂ.ಲೋಕೇಶ್ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭದಲ್ಲಿ ಐತಿಹಾಸಿಕ ನೆಲೆಯನ್ನು ಪರಿಚಯಿಸುವ ಪುಸ್ತಕಗಳ ಬಿಡುಗಡೆ ನಡೆಯಲಿದೆ.
ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾಂಸರುಗಳಿಗೆ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ.ಬಿ.ಶೇಕ್ ಅಲಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಒನಕೆ ಓಬವ್ವ ಪ್ರಶಸ್ತಿ, ಕುಂದಣ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಶುಭಕರಾಚಾರಿ, ಇತಿಹಾಸ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಪ್ರೊ.ಐ.ಕೆ. ಪತ್ತಾರ, ಹೊನ್ನೂರು ಸರಕಾರಿ ಪದವಿ ಕಾಲೇಜಿನ ಮುಖ್ಯಸ್ಥ ಡಾ. ಎನ್.ವಿ.ಅಸ್ಕಿ, ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ, ಕಚೇರಿ ಅಧೀಕ್ಷಕ ಗೋಪಾಲ್, ಉಪನ್ಯಾಸಕ ಶರಣ್ ಎಸ್.ಜೆ., ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.







