ಸೆ.22ರಿಂದ 10ನೇ ವರ್ಷದ ಉಡುಪಿ ದಸರಾ ಕಾರ್ಯಕ್ರಮ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಹಾಗೂ ಪರ್ಯಾಯ ಪುತ್ತಿಗೆ ಶರೀಕೃಷ್ಣ ಮಠದ ಆಶ್ರಯದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರಿಶಾರದೋತ್ಸವ ‘ಉಡುಪಿ ದಸರಾ’ ಸೆ.22ರಿಂದ ಅ.3ರವರೆಗೆ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಂದು ಬೆಳಿಗ್ಗೆ 9ಗಂಟೆಗೆ ನವದುರ್ಗೆಯರು ಮತ್ತು ಶ್ರೀಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸ ಲಾಗುವುದು. ನವರಾತ್ರಿ ಉತ್ಸವದಲ್ಲಿ ಭಜನಾ ಕಾರ್ಯಕ್ರಮ, ಸಂಗೀತ, ನೃತ್ಯ ಸಿಂಚನ, ಯಕ್ಷಗಾನ, ನಾಟಕ, ಜನಪದ ಕಲರವ, ದಾಂಡೀಯಾ, ಕುಣಿತ ಭಜನೆ, ವಿವಿಧ ಸ್ಪರ್ಧೆಗಳು ಸೇರಿ ದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಥಮ ಭಾರಿಗೆ ದ್ವಂದ್ವ ಭಜನಾ ಜುಗಲ್ ಬಂದಿ ನಡೆಯಲಿದೆ. ಸೆ.25ರಂದು ಸಂಜೆ 4ಗಂಟೆಗೆ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ.
ಅ.3ರಂದು ಉಡುಪಿ ಶ್ರೀಕೃಷ್ಣ ಮಠದಿಂದ ಭವ್ಯ ಶೋಭಾಯಾತ್ರೆ ಹೊರಡಲಿದ್ದು, ಉಡುಪಿ ನಗರದ ಮುಖ್ಯ ಮಾರ್ಗದಲ್ಲಿ ಸಾಗಿ ಮಲ್ಪೆಯ ಸಮುದ್ರ ತೀರದಲ್ಲಿ ಸಮಾಪನಗೊಂಡು ಜಲಸ್ತಂಭನಗೊಳಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಪ್ರಸನ್ನ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಭಟ್, ರಾಧಾಕೃಷ್ಣ ಮೆಂಡನ್, ತಾರಾ ಆಚಾರ್ಯ, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





