ನ.23ರಿಂದ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಟೂರ್ನಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಾರಂಭಗೊಳ್ಳಲಿದೆ.
ದೇಶದ ನಾಲ್ಕು ವಲಯಗಳಿಂದ ಅಗ್ರಸ್ಥಾನ ಪಡೆದ ತಲಾ ನಾಲ್ಕರಂತೆ ಒಟ್ಟು 16 ತಂಡಗಳು ಸ್ಪರ್ಧಾ ಕಣದಲ್ಲಿವೆ. ದಕ್ಷಿಣ ವಲಯದಿಂದ ಕರ್ನಾಟಕದ ಮಂಗಳೂರು ವಿವಿ (2ನೇ ಸ್ಥಾನಿ) ಹಾಗೂ ಮೈಸೂರು ವಿವಿ (೩ನೇ ಸ್ಥಾನಿ) ಸೇರಿದಂತೆ ಅಗ್ರಸ್ಥಾನಿ ಚೆನ್ನೈನ ವೆಲ್ಸ್ ಇಸ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಆಂಡ್ ಟೆಕ್ನಾಲಜಿ ಹಾಗೂ ಕಡಪದ ಯೋಗಿ ವೆಮನಾ ವಿವಿ ಭಾಗವಹಿಸಲಿವೆ.
ಮೊದಲ ದಿನ ಮಂಗಳೂರು ವಿವಿ ಜುಂಜುನ ಎಸ್‌ಜೆಜೆಟಿ ವಿವಿಯನ್ನೂ, ಮೈಸೂರು ವಿವಿ, ರೋಹ್ಟಕ್‌ನ ಎಂಡಿ ವಿವಿಯನ್ನು ಎದುರಿಸಲಿದೆ. ಎರಡು ಕೋರ್ಟ್‌ಗಳಲ್ಲಿ ಪಂದ್ಯಗಳು ನಡೆಯಲಿವೆ.
ನ.23ರಂದು ಬೆಳಿಗ್ಗೆ 7 ಗಂಟೆಗೆ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಭೂಮಿಪೂಜೆ ನೆರವೇರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರೆ, ಉದ್ಘಾಟನಾ ಸಮಾರಂಭವು ಬೆಳಗ್ಗೆ 10 ಗಂಟೆಗೆ ಮಂಗಳೂರು ವಿವಿಯ ಉಪಕುಲಪತಿ ಡಾ.ಜಯರಾಜ್ ಅಮೀನ್ ಅಧ್ಯಕ್ಷತೆ ಯಲ್ಲಿ ನಡೆಯಲಿದೆ. ಕಬಡ್ಡಿ ಕ್ರೀಡೆಯಲ್ಲಿ ಅರ್ಜುನ್ ಪ್ರಶಸ್ತಿ ಪುರಸ್ಕೃತ ರಾಕೇಶ್ ಕುಮಾರ್ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವರು.







