ಮಾ.23ರಂದು ಗೋವಿಂದ ಪೈ ಸಂಶೋಧನ ಸಂಪುಟ ಪರಿಷ್ಕೃತ ದ್ವಿತೀಯ ಮುದ್ರಣ ಅನಾವರಣ
ಉಡುಪಿ, ಮಾ.21: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಗೋವಿಂದ ಪೈ ಸಂಶೋಧನ ಸಂಪುಟ ಪರಿಷ್ಕೃತ ದ್ವಿತೀಯ ಮುದ್ರಣ ಭಾಗ- 2 ಇದರ ಅನಾವರಣ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾ.23ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, 1995ರಲ್ಲಿ ಮುದ್ರಣಗೊಂಡ ಈ ಕೃತಿ ಈಗ ಮತ್ತೆ ಮರುಮುದ್ರಣ ಕಾಣುತ್ತಿದೆ. ಈ ಕೃತಿಯಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮಾತ್ರವಲ್ಲ ಕರ್ನಾಟಕ ಹಾಗೂ ಭಾರತ ಚರಿತ್ರೆ ಹಾಗೂ ತುಳುನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಹಲವು ಲೇಖನಗಳಿವೆ. ಇದೀಗ ಎರಡು ಸಂಪುಟಗಳಾಗಿ ಮಾಡಿಕೊಳ್ಳಲಾಗಿದೆ. ಇದೀಗ ದ್ವಿತೀಯ ಆವೃತ್ತಿಯ ದ್ವಿತೀಯ ಸಂಪುಟ ಬಿಡುಗಡೆಗೆ ಇದೀಗ ಸಿದ್ಧವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಬಿ.ಎ.ವಿವೇಕ್ ರೈ ವಹಿಸಲಿರುವರು. ಕೃತಿಯನ್ನು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಬಿಡುಗಡೆ ಗೊಳಿಸಲಿರುವರು. ಇದೇ ಸಂದರ್ಭದಲ್ಲಿ ಟಿ.ವಿ. ಮೋಹನ್‌ದಾಸ್ ಪೈ ಪ್ರವರ್ತಿಸಿರುವ ವಿಮಲಾ ವಿ.ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ -2024ನ್ನು ಸಾಹಿತಿ, ಸಂಶೋಧಕ ಡಾ.ಹಂ.ಪ. ನಾಗರಾಜಯ್ಯ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃತಿಯ ಸಂಪಾದಕರಾದ ಪ್ರೊ.ಮುರಳೀಧರ ಉಪಾಧ್ಯ, ಡಾ.ಪಾದೇಕಲ್ಲು ವಿಷ್ಣು ಭಟ್, ಕೇಂದ್ರದ ಸಹಸಂಶೋಧಕ ಡಾ.ಅರುಣ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು.







