ಆ.23ರಿಂದ ಚಿತ್ರಕಲಾ ಮಂದಿರದಲ್ಲಿ ‘ಸಂಗಮ’ ಸಮೂಹ ಪ್ರದರ್ಶನ

ಉಡುಪಿ: ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ 2002-07ನೇ ಸಾಲಿನಲ್ಲಿ ಚಿತ್ರಕಲೆಯಲ್ಲಿ ಕಲಾ ಪದವಿ ಪಡೆದ 13 ಮಂದಿ ಕಲಾ ವಿದ್ಯಾರ್ಥಿಗಳು 18 ವರ್ಷಗಳ ಬಳಿಕ ತಾವು ಕಲಿತ ಕಲಾಶಾಲೆಲ್ಲಿ ಸಮೂಹ ಕಲಾ ಪ್ರದರ್ಶನ ಹಾಗೂ ಗುರುವಂದನ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಕಲಾವಿದ ಡಾ.ಜನಾರ್ದನ ಹಾವಂಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ಮಂದಿ ಕಲಾವಿದರ ಸಮೂಹ ಕಲಾ ಪ್ರದರ್ಶನ ಆ23ರಿಂದ 31ರವರೆಗೆ ನಡೆಯಲಿದೆ. ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಚಿತ್ರಕಲಾ ಮಂದಿರ ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಈ ಪ್ರದರ್ಶನ ನಡೆಯಲಿದೆ. ಪ್ರತಿದಿನ ಅಪರಾಹ್ನ 2ರಿಂದ ಸಂಜೆ 6ಗಂಟೆಯವರೆಗೆ ಪ್ರದರ್ಶನ ಕಲಾಸಕ್ತರ ವೀಕ್ಷಣೆಗೆ ತೆರೆದಿರುತ್ತದೆ ಎಂದರು.
ಕಲಾಪ್ರದರ್ಶನದ ಉದ್ಘಾಟನೆಯು ನಾಳೆ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಉದ್ಯಮಿ ಅಜಯ್ ಪಿ.ಶೆಟ್ಟಿ ಪ್ರದರ್ಶನ ವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ದಿವಾಕರ ಸನಿಲ್ ಹಾಗೂ ಚಿತ್ರಕಲಾ ಮಂದಿರದ ನಿರ್ದೇಶಕ ಡಾ. ನಿರಂಜನ್ ಯು.ಸಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.
ಇದೇ ಸಂದರ್ಭದಲ್ಲಿ ತಮಗೆ ಕಲಿಸಿದ ಗುರುಗಳಾದ ವಿಶ್ವೇಶ್ವರ ಪರ್ಕಳ, ಡಾ.ನಿರಂಜನ್ ಯು.ಸಿ., ಡಾ.ವಿಶ್ವನಾಥ್ ಎ.ಎಸ್., ಬಸವರಾಜ ಕುತ್ನಿ, ಸುಮಂಗಲಾ ಭಟ್, ಡಾ.ಭಾರತಿ ಮರವಂತೆ, ಮಹೇಶ್ ಉಮತಾರ್, ಗಣೇಶ್ ಮಂದಾರ, ಶಂಕರ್ ಹಂದಾಡಿ ಹಾಗೂ ಮುರಳಿ ಕೃಷ್ಣರಾವ್ ಇವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಗುವುದು. ಕಲಾಭೀಷ್ಮ ಕೆ.ಎಲ್.ಭಟ್ ಇವರ ಸಂಸ್ಮರಣೆ ನಡೆಯಲಿದೆ ಎಂದು ಡಾ.ಹಾವಂಜೆ ತಿಳಿಸಿದರು.
18ವರ್ಷಗಳ ಹಿಂದೆ ಇಲ್ಲಿ ಕಲಾ ವಿದ್ಯಾರ್ಥಿಗಳಾಗಿದ್ದ ಒಟ್ಟು 13 ಮಂದಿ ಕಲಾವಿದರ 30ರಷ್ಟು ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಅನ್ನಪೂರ್ಣ ಕಾಮತ್, ಡಾ.ಜನಾರ್ದನ ಹಾವಂಜೆ, ಕಾಂತಿ ನವೀನ್‌ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ ಎಸ್.ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋದ್ ಸನಿಲ್ ಅವರು ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ ಗಣೇಶ ಹಾಗೂ ಸಮಕಾಲೀನ ಶೈಲಿಯ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದರು.
ಪ್ರದರ್ಶನ ಆ.23ರಿಂದ 31ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಕಾಂತಿ ನವೀನ್ ಪ್ರಭು, ಪುರಂದರ ಆಚಾರ್ಯ ಉಪಸ್ಥಿತರಿದ್ದರು.







