ನ.23: 23 ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

ಉಡುಪಿ: ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನ.23ರ ರವಿವಾರ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್ ಆ್ಯಂಡ್ ಟ್ರೈನಿಂಗ್ ರಿಸರ್ಚ್ ಸೆಂಟರ್ ಸಭಾಂಗಣದಲ್ಲಿ ಸಂಜೆ 4:30ಕ್ಕೆ ನಡೆಯಲಿದೆ ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ.ರಾಘವೇಂದ್ರ ಭಟ್ ಶುಭಾಶಂಸನೆ ಮಾಡಲಿದ್ದಾರೆ. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಯಕ್ಷ ವಿದ್ಯಾಪೋಷಕ್‌ನ 62 ಮಂದಿ ವಿದ್ಯಾರ್ಥಿಗಳಿಗೆ 7,11,500ರೂ. ಸಹಾಯಧನವನ್ನು ವಿತರಿಸಲಿದ್ದಾರೆ ಎಂದವರು ಹೇಳಿದರು.
ಈ ಬಾರಿ ಯಕ್ಷಗಾನದ 23 ಮಂದಿ ಹಿರಿಯ ಕಲಾವಿದರಿಗೆ ಯಕ್ಷಗಾನ ಕಲಾರಂಗದ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯೊಂದಿಗೆ ತಲಾ 20,000 ರೂ. ನಗದು ನೀಡಲಾಗುತ್ತದೆ. ಸಂಸ್ಥೆಯೊಂದಿಗೆ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯೊಂದಿಗೆ ನೀಡುವ 1,00,000ರೂ. ನಗದನ್ನು ಈ ಬಾರಿ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ಸಂಸ್ಥೆಗೆ ನೀಡಿ ಗೌರವಿಸಲಾಗುವುದು. ಅದೇ ರೀತಿ ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಇವರಿಗೆ ಪ್ರದಾನ ಮಾಡಲಾಗುವುದು ಎಂದು ಎಂ.ಗಂಗಾಧರ ರಾವ್ ತಿಳಿಸಿದರು.
ಸಮಾರಂಭಕ್ಕೆ ಅಪರಾಹ್ನ 1:30ರಿಂದ 4:30ರವರೆಗೆ ಬಡಗುತಿಟ್ಟಿನ ಕಲಾವಿದರಿಂದ ‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ ಎಂದೂ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷ ರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
2025ನೇ ಸಾಲಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ವಿಜೇತರು
ಡಾ.ಬಿ.ಬಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ-ಸುಬ್ರಹ್ಮಣ್ಯ ಚಿಟ್ಟಾಣಿ, ಪ್ರೊ.ಬಿ.ವಿ. ಆಚಾರ್ಯ ಪ್ರಶಸ್ತಿ-ಕಕ್ಕುಂಜೆ ಗೋಪಾಲ ಬಳೆಗಾರ, ನಿಟ್ಟೂರು ಸುಂದರ ಶೆಟ್ಟಿ, ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ-ಕೊಡೇರಿ ಕೃಷ್ಣ, ಬಿ.ಜಗಜ್ಜೀವನದಾಸ ಶೆಟ್ಟಿ ಪ್ರಶಸ್ತಿ- ಕಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ಕೆ.ವಿಶ್ವಜ್ಞ ಶೆಟ್ಟಿ ಪ್ರಶಸ್ತಿ- ರಾದಾಕೃಷ್ಣ ಭಟ್ ಸೂರನಕೇರಿ.
ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ- ಸುರೇಶ ಉಪ್ಪೂರ, ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ- ಕೃಷ್ಣಯ್ಯ ಬಿ.ಆಚಾರ್ ಬಿದ್ಕಲ್‌ಕಟ್ಟೆ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಪ್ರಶಸ್ತಿ- ಮನೋಹರ ರಾವ್ ಕೆ.ಜಿ. ಸೀತೂರು, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ- ಪ್ರಭಾಕರ ಶೆಟ್ಟಿ ಮಡಾಮಕ್ಕಿ, ಕೋಟ ವೈಕುಂಠ ಪ್ರಶಸ್ತಿ- ವಿಷ್ಣು ಮಂಜಪ್ಪ ಆಚಾರಿ ಬಳಕೂರು.
ಪಡಾರು ನರಸಿಂಹ ಶಾಸ್ತ್ರ ಪ್ರಶಸ್ತಿ- ಲಕ್ಷ್ಮೀನಾರಾಯಣ ಸಂಪ, ಕಡಿಯಾಳಿ ಸುಬ್ರಾಯ ಉಪಾಧ್ಯ ಪ್ರಶಸ್ತಿ- ಸಂಜೀವ ಶೆಟ್ಟಿ ಆಜ್ರಿಹರ, ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ- ಸುಣ್ಣಂಬಳ ವಿಶ್ವೇಶ್ವರ ಭಟ್, ಐರೋಡಿ ರಾಮ ಗಾಣಿಗ ಪ್ರಶಸ್ತಿ-ಸುರೇಶ್ ರಾವ್ ಬಾರ್ಕೂರು, ಮಾನ್ಯ ತಿಮ್ಮಯ್ಯ ಪ್ರಶಸ್ತಿ- ಅಪ್ಪಯ್ಯ ಮಣಿಯಾಣಿ.
ಎಚ್.ಪರಮೇಶ್ವರ ಐತಾಳ್ ಪ್ರಶಸ್ತಿ- ಕೃಷ್ಣಮೂರ್ತಿ ಉರಾಳ, ಕಡಂದೇಲು ಪುರುಷೋತ್ತಮ ಭಟ್ ಪ್ರಶಸ್ತಿ- ರಾಮ ಕೇಶವ ಗೌಡ ಗುಣವಂತೆ, ಕಡತೋಕಾ ಕೃಷ್ಣ ಭಾಗವತ ಪ್ರಶಸ್ತಿ- ಕಡಬ ರಾಮಚಂದ್ರ ರೈ, ಬಿ.ಪಿ.ಕರ್ಕೇರಾ ಪ್ರಶಸ್ತಿ- ಉಮೇಶ ಮೊಲಿ ಮೂರುಕಾವೇರಿ, ಕೆ.ಮನೋಹರ ಪ್ರಶಸ್ತಿ- ಶಿವಣ್ಣ ಶೆಟ್ಟಿ ಸರಪಾಡಿ, ಆರ್.ಕೆ.ರಮೇಶ ರಾವ್ ಪ್ರಶಸ್ತಿ- ಮೋಹನ ನಾಯ್ಕ್ ಕೂಜಳ್ಳಿ.
ಕೋಳ್ಯೂರುರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ- ಬಲಿಪ ವಿಶ್ವೇಶ್ವರ ಭಟ್, ಪ್ರಭಾವತಿ ವಿ.ಶೆಣೈ, ಯು.ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ- ಮಹಾಬಲ ಭಟ್, ಭಾಗಮಂಡಲ. ಶ್ರೀವಿಶ್ವೇಶತೀರ್ಥ ಪ್ರಶಸ್ತಿ- ಬೆಂಗಳೂರಿನ ಯಕ್ಷಕಲಾ ಅಕಾಡೆಮಿ, ಯಕ್ಷ ಚೇತನ ಪ್ರಶಸ್ತಿ- ಮುರಲಿ ಕಡೆಕಾರ್.







