ಅ.24: ಪರಿವಾರ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ

ಉಡುಪಿ, ಅ.23: ಉಡುಪಿಯ ಪರಿವಾರ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಹಾಗೂ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.24ರ ಶನಿವಾರ ಸಂಜೆ 4:30ಕ್ಕೆ ಜೋಡುಕಟ್ಟೆಯ ಆಶ್ರಯ ಟವರ್ಸ್ನಲ್ಲಿ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ, ಮಾಜಿ ಶಾಸ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ಸಹಕಾರಿ ಶಂಭು ಶೆಟ್ಟಿ ಅವರು ನೂತನ ಕಟ್ಟಡ ಉದ್ಘಾಟಿಸಲಿದ್ದು, ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಎಂದರು.
ಶಿವಪಾಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹೆಸರಿನಲ್ಲಿ 2000ದಲ್ಲಿ ಪ್ರಾರಂಭಗೊಂಡ ಈ ಸಂಘ, ಬಳಿಕ ಪರಿವಾರ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಮುನ್ನಡೆದು ಇದೀಗ ರಜತ ಮಹೋತ್ಸವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸ್ವಂತ ಹವಾನಿಯಂತ್ರಿತ ಕಟ್ಟಡದಲ್ಲಿ ಸ್ವಂತ ಪ್ರಧಾನ ಕಚೇರಿಯನ್ನು ಪ್ರಾರಂಬಿಸುವ ಮೂಲಕ ನೂತನ ಮೈಲಿಗಲ್ಲನ್ನು ಸಾಧಿಸಿದ್ದೇವೆ ಎಂದರು.
ಸಂಘವು ನಿರಂತರ ಲಾಭದಲ್ಲಿ ಮುನ್ನಡೆಯುತಿದ್ದು, ಸದಸ್ಯರಿಗೆ ಪ್ರತಿವಷ ಶೇ.12 ಡಿವಿಡೆಂಟ್ ನೀಡುತ್ತಿದೆ. ಸದ್ಯ 2000 ಸದಸ್ಯರನ್ನು ಹೊಂದಿರುವ ಸಂಘ ಸುಮಾರು 50 ಕೋಟಿ ಠೇವಣಿ ಹೊಂದಿದ್ದು ಒಟ್ಟು 125 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಸುರೇಶ್ ಪ್ರಭು, ಗಣೇಶ ಕುಮಾರ್, ಅವಿನಾಶ್ ಹಾಗೂ ಮುಖ್ಯ ಕಾರ್ಯ ನಿರ್ವವಹಣಾಧಿಕಾರಿ ರಂಜಿತಾ ಪ್ರವೀಣ್ ಉಪಸ್ಥಿತರಿದ್ದರು.






