24 ಕಲಾವಿದರುಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

ಉಡುಪಿ, ನ.15: ಯಕ್ಷಗಾನ ಕಲಾರಂಗದ ವತಿಯಿಂದ 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ 24 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 20,000 ನಗದು ಪುರಸ್ಕಾರ, ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡಕ್ಕೆ 1 ಲಕ್ಷ ಮೊತ್ತದ ಶ್ರೀವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್ ಸಿ. ಉದ್ಯಾವರ ಇವರಿಗೆ ಯಕ್ಷಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ವೃತ್ತಿ ಗಾಗಿ ಬದುಕನ್ನು ಮೀಸಲಿಟ್ಟು ಸಾಧನೆ ಮಾಡಿದ ಯಕ್ಷಗಾನ ಕಲಾವಿದರು ತಪಸ್ವಿಗಳಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ.ಟಿ.ಶ್ಯಾಮ್ ಭಟ್ ವಹಿಸಿದ್ದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಯಕ್ಷ ವಿದ್ಯಾಪೋಷಕ್ನ 74 ವಿದ್ಯಾರ್ಥಿಗಳಿಗೆ 8,34,500 ರೂ. ಸಹಾಯಧನವನ್ನು ವಿತರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಾಂತ್ವನ ನಿಧಿಯನ್ನು ವಿತರಿಸಿದರು.
ಉದ್ಯಮಿ ಹರೀಶ್ ರಾಯಸ್, ನಮ್ಮ ಕುಡ್ಲದ ಆಡಳಿತ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ, ಹೊನ್ನಾವರ ಎಂ.ಪಿ.ಇ ಸೊಸೈಟಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್, ಕೆರೆಕಾಡು ಶ್ರೀವಿನಾಯಕ ಯಕ್ಷಕಲಾ ತಂಡದ ಅಧ್ಯಕ್ಷ ಜಯಂತ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಹೆಗಡೆ ಸಾಧಕರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಬಡಗುತಿಟ್ಟಿನ ಕಲಾವಿದ ರಿಂದ ಯಕ್ಷಗಾನ ರಾಜಾ ದ್ರುಪದ ಪ್ರಸ್ತುತಿಗೊಂಡಿತು.






