ತುಳುಕೂಟದ 24ನೇ ಕೆಮ್ತೂರು ತುಳು ನಾಟಕ ಸ್ಪರ್ಧೆ; ಸುಮನಸಾ ಕೊಡವೂರು ‘ಯೇಸ’ಕ್ಕೆ ಕೆಮ್ತೂರು ದೊಡ್ಡಣ ಶೆಟ್ಟಿ ಪ್ರಶಸ್ತಿ

ಉಡುಪಿ: ತುಳುಕೂಟ ಉಡುಪಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 24ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರು ತಂಡದ ‘ಯೇಸ’ ನಾಟಕ ಪ್ರಥಮ ಸ್ಥಾನದೊಂದಿಗೆ ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮಾರಕ ಟ್ರೋಪಿಯನ್ನು ಗೆದ್ದುಕೊಂಡಿದೆ.
ಜ.5ರಿಂದ 11ರವರೆಗೆ ನಡೆದ ಈ ಬಾರಿಯ ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು, ಮಣಿಪಾಲದ ಸಂಗಮ ಕಲಾವಿದರು ತಂಡದ ‘ಮಾಯೊಕದ ಮಣ್ಣಕರ’ ನಾಟಕ ದ್ವಿತೀಯ ಶ್ರೇಷ್ಠ ನಾಟಕ ಪ್ರಶಸ್ತಿ ಹಾಗೂ ಮುಂಬಯಿಯ ರಂಗಮಿಲನ ತಂಡದ ‘ನಾಗಸಂಪಿಗೆ’ ನಾಟಕ ತೃತೀಯ ಶ್ರೇಷ್ಠ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿವೆ.
ಶ್ರೇಷ್ಠ ನಿರ್ದೇಶಕ ವೈಯಕ್ತಿಕ ಪ್ರಶಸ್ತಿ ಸುಮನಸಾ ಕೊಡವೂರು ತಂಡದ ‘ಯೇಸ’ ನಾಟಕದ ನಿರ್ದೇಶಕ ವಿದ್ದು ಉಚ್ಚಿಲ್ ಪಡೆದರೆ, ಸಂಗಮ ಕಲಾವಿದರು ಮಣಿಪಾಲ ತಂಡದ ‘ಮಾಯಕೊದ ಮಣ್ಣಕರ’ ನಿರ್ದೇಶಕ ರಮೇಶ್ ಕೆ ಬೆಣಕಲ್‌ಗೆ ದ್ವಿತೀಯ ಮತ್ತು ನಾಗಸಂಪಿಗೆ ನಾಟಕದ ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಇವರಿಗೆ ತೃತೀಯ ಸ್ಥಾನ ಲಭಿಸಿದೆ.
ಶ್ರೇಷ್ಠ ನಟರಾಗಿ ಮಾಯೊಕದ ಮಣ್ಣಕರ ನಾಟಕದ ‘ಅಡ್ಕ’ ಪಾತ್ರಧಾರಿ ಸಂತೋಷ್ ಶೆಟ್ಟಿ ಹಿರಿಯಡ್ಕ ಪ್ರಥಮ, ಮುಗಿಯಂದಿ ಕಥೆ ನಾಟಕದ ‘ವಿಜಯ’ ಪಾತ್ರಧಾರಿ ಮಂಜುನಾಥ್ ಆಚಾರ್ಯ ಕುಂಜೂರು ದ್ವಿತೀಯ ಹಾಗೂ ಯೇಸ ನಾಟಕದ ‘ಸಜ್ಜನ ಹೇಮಂತ್’ ಪಾತ್ರಧಾರಿ ಕಿರಣ್ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ನಟಿಯಾಗಿ ಯೇಸ ನಾಟಕದ ‘ಸತ್ಯಶ್ರೀ’ ಪಾತ್ರಧಾರಿಣಿ ಸೌಭಾಗ್ಯ ಲಕ್ಷ್ಮೀ ಪ್ರಥಮ, ಮುಗಿಯಂದಿ ಕಥೆ ನಾಟಕದ ಕುಸುಮಾ ಪಾತ್ರಧಾರಿಣಿ ಕುಸುಮಾ ಕಾಮತ್ ಕರ್ವಾಲ್ ದ್ವಿತೀಯ ಹಾಗೂ ಮಾಯೊಕದ ಮಣ್ಣಕರ ನಾಟಕದ ಮುಡ್ಕ ಪಾತ್ರಧಾರಿಣಿ ವೈಷ್ಣವಿ ಭಂಡಾರ್ಕರ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ರಂಗಪರಿಕರ/ಪ್ರಸಾದನದಲ್ಲಿ ಸಂಗಮ ಕಲಾವಿದೆರ್ ಮಣಿಪಾಲ ಪ್ರಥಮ, ಸುಮನಸಾ ಕೊಡವೂರು ಉಡುಪಿ ದ್ವಿತೀಯ ಹಾಗೂ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ (ನೆಲ ನೀರ್‌ದ ದುನಿಪು) ತೃತೀಯ ಸ್ಥಾನ ಪಡೆದಿದೆ.
ಶ್ರೇಷ್ಠ ಬೆಳಕಿನಲ್ಲಿ ಯೇಸ ನಾಟಕದ ನಿಖಿಲ್ ಮೈಂದನ್ ಪ್ರಥಮ, ನೆಲ ನೀರ್‌ದ ದುನಿಪು ನಾಟಕದ ಪ್ರಥ್ವಿನ್ ಕೆ ಉಡುಪಿ ದ್ವಿತೀಯ, ನಾಗಸಂಪಿಗೆ ನಾಟಕದ ನಿತಿನ್ ಪೆರಂಪಳ್ಳಿ ತೃತೀಯ ಸ್ಥಾನಿಯಾಗಿದ್ದಾರೆ.
ಶ್ರೇಷ್ಠ ಸಂಗೀತದಲ್ಲಿ ಯೇಸ ನಾಟಕದ ಶೋಧನ್ ಎರ್ಮಾಳ್ ಪ್ರಥಮ, ಮಾಯೊಕದ ಮಣ್ಣಕರ ನಾಟಕದ ಶುಭಕರ ಪುತ್ತೂರು ದ್ವಿತೀಯ, ನಾಗ ಸಂಪಿಗೆ ನಾಟಕದ ದಿವಾಕರ್ ಕಟೀಲ್ ಇವರಿಗೆ ತೃತೀಯ ಬಹುಮಾನಗಳು ದೊರೆತಿವೆ.
ತೀರ್ಪುಗಾರರ ಮೆಚ್ಚುಗೆ ಪಡೆದ ನಟ/ನಟಿಯರು: ದಿನೇಶ್ ಅಮೀನ್ ಕದಿಕೆ ‘ಪಿಲಿ’ ನಾಟಕದ ಮಾರ + ಅಜೈರ್ ಪಾತ್ರಧಾರಿ, ಕಾಶೀತೀರ್ಥ ನಾಟಕದ ಎಂಎಲ್‌ಎ ಭರತ್‌ರಾಜ್ ಪಾತ್ರಧಾರಿ ಶಿವಪ್ಪ ಬಿರುವ ಗುರುವಾಯನಕೆರೆ, ನಾಗಸಂಪಿಗೆ ನಾಟಕದ ಕಾಳಿಂಗ ಪಾತ್ರಧಾರಿ ಸಚಿನ್ ಬಿವಂಡಿ, ನೆಲ ನೀರ್‌ದ ದುನಿಪು ನಾಟಕದ ಚೋಮ ಪಾತ್ರಧಾರಿ ಅನಿಲ್ ಕುಮಾರ್ ಶಂಕರಪುರ, ಯೇಸ ನಾಟಕದ ಹೇಮಂತ್ ಪಾತ್ರಧಾರಿ ಕಾರ್ತಿಕ್ ಪ್ರಭು, ಮಾಯೊಕದ ಮಣ್ಣಕರ ನಾಟಕದ ಕೇಶವ ಆಚಾರ್ಯ, ರೈತ, ಪೊಲಿಟಿಷಿಯನ್, ಬಾರ್‌ಕುಡ್ಕ, ಕಾನ್‌ಸ್ಟೇಬಲ್ ಪಾತ್ರಧಾರಿ ಭುವನ್ ಮಣಿಪಾಲ್, ನಾಗಸಂಪಿಗೆ ನಾಟಕದ ಸಂಪಿಗೆ ಪಾತ್ರಧಾರಿಣಿ ದೀಕ್ಷಾ ದೇವಾಡಿಗ, ಮುಗಿಯಂದಿ ಕತೆ ನಾಟಕದ ಚಂದ್ರ ಪಾತ್ರಧಾರಿಣಿ ಚಂದ್ರಕಲಾ ರಾವ್ ಕದಿಕೆ, ಯೇಸ ನಾಟಕದ ರೋಜಿ ಪಾತ್ರಧಾರಿಣಿ ವಸುಪ್ರದ, ಮಾಯೊಕದ ಮಣ್ಣಕರ ನಾಟಕದ ತಿಮ್ಮ, ತಿಮ್ಮದೇವ, ಕಾಗೆ ಪಾತ್ರಧಾರಿಣಿ ನಮ್ರತಾ.
ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟ/ನಟಿಯರು: ಪಿಲಿ ನಾಟಕದ ಸುಬ್ಬು ಪಾತ್ರಧಾರಿ ಪ್ರಣವ್ ಆಚಾರ್ಯ, ಪಿಲಿ ನಾಟಕದ ನೀಲಾ ಪಾತ್ರಧಾರಿಣಿ ಪ್ರಾಪ್ತಿ ಆಚಾರ್ಯ, ಯೇಸ ನಾಟಕದ ಹೋರಾಟಗಾರ ಮೃಣಾಲ್ ಪ್ರಕಾಶ್, ಮಾಯೊಕದ ಮಣ್ಣಕರ ನಾಟಕದ ನಾಯಿ ಪಾತ್ರಧಾರಿ ವಿಶಾಂತ್ ಇವರು ಪ್ರಶಸ್ತಿ ಪಡೆದಿದ್ದಾರೆ.
24ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಮೋಹನ್ ಶೇಣಿ, ಗಂಗಾಧರ ಪಣಿಯೂರು, ಡಾ. ಸುಕನ್ಯ ಮೇರಿ ಮಾರ್ಟಿಸ್ ಸಹಕರಿಸಿದ್ದರು.
ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭ ಫೆಬ್ರವರಿ 8ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ಸಹ ನಡೆಯಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







