ನ.25: ಉದ್ಯಾವರದಲ್ಲಿ ಯುಎಫ್‌ಸಿ ಮಕ್ಕಳ ಹಬ್ಬ
ಉಡುಪಿ, ನ.21: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ಯುಎಫ್‌ಸಿ ಮಕ್ಕಳ ಹಬ್ಬ-2023 ನ.25ರ ಶನಿವಾರ ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ಉದ್ಯಾವರ ಶ್ರೀವಿಠೋಬ ರುಖುಮಾಯಿ ನಾರಾಯಣಗುರು ಮಂದಿರ ದಲ್ಲಿ ನಡೆಯಲಿದೆ.
ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ಝೀ ಟಿವಿ ಸರಿಗಮಪ ಲಿಟಲ್ ಚಾಂಪಿಯನ್‌ಷಿಪ್ ಸೀಸನ್-19ರ ರನ್ನರ್ ಅಪ್ ಶಿವಾನಿ ನವೀನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ವಿನಯಕುಮಾರ ಸೊರಕೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮತ್ತು ಉಡುಪಿ ಜಿಲ್ಲಾ ಅನಿವಾಸಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಡುಪಿ ಶೇಖ್ ವಾಹಿದ್ ಭಾಗವಹಿಸಲಿದ್ದಾರೆ.
ಸಂಜೆ 4:00ಕ್ಕೆ ಜರಗುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್‌ನ ನಿರ್ದೇಶಕಿ, ವಿದುಷಿ ಭ್ರಮರಿ ಶಿವಪ್ರಕಾಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಉಡುಪಿ ಕಾಂಗ್ರೆಸ್ ನಾಯಕ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮತ್ತು ಉದ್ಯಾವರ ಹಲೀಮಾ ಸಾಬ್ಜು ಚಾರಿಟೇಬಲ್‌ನ ಆಡಳಿತ ವಿಶ್ವಸ್ಥ ಅಬ್ದುಲ್ ಜಲೀಲ್ ಸಾಹೇಬ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್ ಮತ್ತು ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







