ಸೆ.25: ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ

ಉಚ್ಚಿಲ, ಸೆ.21: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘವು ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಸೆ.25ರಂದು ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಲಿದೆ.
ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಸ್ಥಾಪಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದ ಹಿನ್ನೆಲೆಯಲ್ಲಿ, ಮೊಗವೀರ ಸಮಾಜ ಬಾಂಧವರ ಸಂಕಲ್ಪದಂತೆ ಸುಮಾರು ರೂ.3 ಕೋಟಿ ವೆಚ್ಚದಲ್ಲಿ, 31 ಅಡಿ ಎತ್ತರ ಹಾಗೂ ಸುಮಾರು 14 ಸಾವಿರ ಕೆ.ಜಿ. ತೂಕದ ಕಂಚನ್ನು ಬಳಸಿ ಭವ್ಯ ಪುತ್ಥಳಿಯನ್ನು ನಿರ್ಮಿಸಲಾಗಿದೆ.
ಈ ಪುತ್ಥಳಿಯು ಮೊಗವೀರ ಸಮಾಜದ ಏಕತೆ, ಗುರುಭಕ್ತಿ ಹಾಗೂ ಗುರು ಪರಂಪರೆಯ ಭವ್ಯತೆಯನ್ನು ಮುಂದಿನ ಪೀಳಿಗೆಗೆ ಸಾರುವ ಮಹತ್ವದ ಪ್ರತೀಕ ಉದ್ದೇಶ ಮೊಗವೀರ ಸಮಾಜದ್ದಾಗಿದೆ. ಶ್ರದ್ಧಾ-ಭಕ್ತಿಯಿಂದ ನಿರ್ಮಾಣ ಗೊಂಡಿರುವ ಮೊಗವೀರ ಕುಲಗುರುಗಳ ಕಂಚಿನ ಪುತ್ಥಳಿ ಅನಾವರಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲ್ಪಟ್ಟಿರುವ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮ ಸೆ.25ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ನೂತನ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಝ್ವಾನ್ ಅರ್ಷದ್ ಅವರು ಗುರಿಕಾರರಿಗೆ ಗೌರವಧನ ವಿತರಿಸಲಿದ್ದು, ನಾಡೋಜ ಡಾ.ಜಿ. ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉದ್ಯಮಿಗಳಾದ ಆನಂದ ಸಿ. ಕುಂದರ್ ಕೋಟ, ಪ್ರಸಾದ್ ರಾಜ್ ಕಾಂಚನ್, ದ.ಕ. ಮೊಗವೀರ ಮಹಾಜನ ಸಂಘ ಮುಂಬೈ ಸಮಿತಿಯ ಗೌರವಾಧ್ಯಕ್ಷ ವೇದ್‌ಪ್ರಕಾಶ್ ಶ್ರೀಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಅಧ್ಯಕ್ಷರಾದ ಗಣೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ, ಮುಂಬೈ ಇದರ ಅಧ್ಯಕ್ಷ ಸಂತೋಷ್ ಪುತ್ರನ್, ದ.ಕ. ಮೊಗವೀರ ಮಹಿಳಾ ಮಹಾಜನ ಸಂಘ ಅಧ್ಯಕ್ಷರಾದ ಕವಿತಾ ಶರತ್ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿರುವರು.
ಮೊಗವೀರ ಸಮಾಜದ ಗುರಿಕಾರರು, ಸಮಾಜ ಬಾಂಧವರು, ಸಂಯುಕ್ತ ಸಭೆಗಳ ಹಾಗೂ ಗ್ರಾಮ ಸಭೆಗಳ ಪ್ರತಿನಿಧಿಗಳು, ವಿವಿಧ ಮಹಿಳಾ ಸಂಘಗಳ ಸದಸ್ಯೆಯರು, ವಿವಿಧ ಮೀನುಗಾರಿಕಾ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ ಕರಾವಳಿ ಕರ್ನಾಟಕದ ಸರ್ವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.






