ಅ.26: ರಾಧಾಕೃಷ್ಣ ನೃತ್ಯನಿಕೇತನದಿಂದ ಭರತಮುನಿ ಜಯಂತಿ

ಉಡುಪಿ, ಅ.23: ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನವು ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ 23ನೇ ವರ್ಷದ ಭರತಮುನಿ ಜಯಂತ್ಯುತ್ಸವವನ್ನು ಅ.26ರ ರವಿವಾರದಂದು ಶ್ರೀಕೃಷ್ಣ ಮಠದ ರಾಜಾಂಣದಲ್ಲಿ ಆಯೋಜಿಸಿದೆ ಎಂದು ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಮುರಳೀಧರ್ ಸಾಮಗ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭರತಮುನಿ ಜಯಂತ್ಯುತ್ಸವವನ್ನು ಅ.26ರ ಬೆಳಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿರುವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿದಿಯೂರಿನ ವೇದಮೂರ್ತಿ ಕೆ. ಪದ್ಮನಾಭ ಭಟ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀದೇವಿ ನೃತ್ಯಾರಾಧನ ಕಲಾಕೇಂದ್ರದ ವಿದುಷಿ ರೋಹಿಣಿ ಉದಯ್ ಭಾಗವಹಿಸಲಿದ್ದಾರೆ ಎಂದರು.
ಪ್ರತಿ ವರ್ಷದಂತೆ ಈ ಬಾರಿಯೂ ಶಿವಮೊಗ್ಗ ನಟನಂ ಬಾಲ್ಯ ನಾಟ್ಯ ಕೇಂದ್ರದ ನಿರ್ದೇಶಕ ಡಾ.ಎಸ್.ಕೇಶವ್ ಕುಮಾರ್ ಪಿಳ್ಳೈ ಹಾಗೂ ಕಾಸರಗೋಡು ಮಂಜೇಶ್ವರದ ನಾಟ್ಯನಿಲಯಂನ ಗುರು ವಿದ್ವಾನ್ ಬಾಲಕೃಷ್ಣ ಬಿ. ಇವರಿಗೆ ಭರತ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು ಎಂದು ವೀಣಾ ಸಾಮಗ ತಿಳಿಸಿದರು.
ಈ ಬಾರಿ ನಿರಂತರ ನೃತ್ಯ ಕಾರ್ಯಕ್ರಮ ನೀಡಿ ವಿಶ್ವ ದಾಖಲೆ ಸ್ಥಾಪಿಸಿರುವ ಮಂಗಳೂರಿನ ರೆಮೊನಾ ಇವೆಟೆ ಪೆರೆರಾ ಹಾಗೂ ಉಡುಪಿಯ ವಿದುಷಿ ದೀಕ್ಷಾ ಇವರಿಗೆ ‘ಕಲಾರ್ಪಣ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುವುದು ಎಂದರು.
ಸಂಸ್ಥೆಯ ವತಿಯಿಂದ ನೀಡಲಾಗುವ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಗೆ ಈ ಬಾರಿ ವಿದುಷಿ ಶ್ರಾವ್ಯ, ವಿದುಷಿ ಸಿಂಚನಾ, ವಿದುಷಿ ಮೇಘನಾ, ವಿದುಷಿ ಸಹನಾ ದೀಪ್ತಿ ಹಾಗೂ ವಿದುಷಿ ಮೇಧಾ ತಂತ್ರಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಅಪರಾಹ್ನ 12ರಿಂದ ರಾಧಾಕೃಷ್ಣ ನೃತ್ಯನಿಕೇತನದ ಶಿಷ್ಯರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ ಹಾಗೂ 3:00ರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ. ಸಂಜೆ 7:00ರಿಂದ ರಾಧಾಕೃಷ್ಣ ನೃತ್ಯನಿಕೇತನದ ಶಿಷ್ಯರಿಂದ ‘ನೃತ್ಯಾಭಿಷೇಕಂ’ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ವೀಣಾ ಸಾಮಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಂ.ಪೃಥ್ವಿರಾಜ್ ಸಾಮಗ, ವಿಶ್ವರೂಪ ಮಧ್ಯಸ್ಥ, ಅದಿತಿ ನಾಯಕ್, ರಾಧಿಕಾ ಹಾಗೂ ಸ್ವಾತಿ ಉಪಾಧ್ಯಾಯ ಉಪಸ್ಥಿತರಿದ್ದರು.







