ಜೂ.28: ಯಕ್ಷಗಾನ ಕಲಾರಂಗದ 100ನೇ ಮನೆ ಹಸ್ತಾಂತರ

ಉಡುಪಿ, ಜೂ.25: ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಉಡುಪಿ ಯಕ್ಷಗಾನ ಕಲಾರಂಗ ತನ್ನ ‘ವಿದ್ಯಾಪೋಷಕ್’ ಯೋಜನೆಯಡಿಯಲ್ಲಿ ಬಡ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ದಾನಿಗಳ ಮೂಲಕ ನಿರ್ಮಿಸಿಕೊಡುತ್ತಿರುವ 100ನೇ ಮನೆಯ ಹಸ್ತಾಂತರ ಜೂ.28ರಂದು ನಡೆಯಲಿದ್ದು, ಇದರೊಂದಿಗೆ ಸೂರು ನೂರರ ಸಡಗರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲಾರಂಗ 2012ರಿಂದ ದಾನಿಗಳ ನೆರವಿನಿಂದ ಬಡ ಯಕ್ಷಗಾನ ಕಲಾವಿದರಿಗೆಂದು ಉಚಿತವಾಗಿ ಮನೆ ನಿರ್ಮಿಸಿಕೊಡುವ ಕಾರ್ಯಕ್ರಮ ಮುಂದೆ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದು ಈವರೆಗೆ 10 ಮಂದಿ ಕಲಾವಿದರು ಹಾಗೂ 90 ಮಂದಿ ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಟ್ಟ ತೃಪ್ತಿ, ಅಭಿಮಾನ ತಮಗಿದೆ ಎಂದರು.
ಇದೀಗ 100ನೇ ಮನೆಯನ್ನು ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಕುಲ್ಮುಂದ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾಳಿಗೆ ನಿರ್ಮಿಸಿದ್ದು, ಇದರ ಹಸ್ತಾಂತರ ಸಮಾರಂಭ ಜೂ.28ರ ಬೆಳಗ್ಗೆ 9:30ಕ್ಕೆ ನಡೆಯಲಿದೆ. ಈ ಮನೆಯನ್ನು ಇದುವರೆಗೆ ವಿದ್ಯಾಪೋಷಕ್‌ನಿಂದ ಮನೆ ನಿರ್ಮಿಸಿಕೊಂಡ 100 ಮಂದಿ ಫಲಾನುಭವಿಗಳ ಕುಟುಂಬವೇ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದೆ ಎಂದು ಮುರಳಿ ಕಡೆಕಾರ್ ತಿಳಿಸಿದರು.
ಮನೆಯನ್ನು ಪರ್ಯಾಯ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ಉದ್ಘಾಟಿಸಲಿ ದ್ದಾರೆ. ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್‌ಕುಮಾರ್ ಹಾಗೂ ಇತರರು ಬಾಗವಹಿಸಲಿದ್ದಾರೆ ಎಂದರು.
ಬಳಿಕ ಈ ಐತಿಹಾಸಿಕ ಸಾಧನೆಯನ್ನು ಆಚರಿಸಲು ’ಸೂರು ನೂರರ ಸಡಗರ’ ಎಂಬ ವಿಶೇಷ ಕಾರ್ಯಕ್ರಮವನ್ನು ಅದೇ ದಿನ ಅಪರಾಹ್ನ 2:00 ರಿಂದ 4ಗಂಟೆವರೆಗೆ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಪ್ರಧಾನ ಸಮಾರಂಭ ನಡೆಯಲಿದೆ. ಉಡುಪಿ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ದೀಪ ಬೆಳಗಿಸಿ ಆಶೀರ್ವ ಚನ ನೀಡಲಿದ್ದಾರೆ. ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಎಂ.ಡಿ ಮತ್ತು ಸಿಇಓ ಎಂ. ರಾಘವೇಂದ್ರ ಭಟ್ ಅವರು ‘ಸೂರು ನೂರರ’ ಸಂಪುಟವನ್ನು ಬಿಡುಗಡೆ ಮಾಡಲಿದ್ದಾರೆ. ಗೀತಾನಂದ ಫೌಂಡೇಶನ್ ಕೋಟದ ಆನಂದ ಸಿ. ಕುಂದರ್ ಶುಭಾ ಶಂಸನೆ ಮಾಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಐವರು ಶಾಸಕರು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನೂರು ಮನೆಗಳ ಪ್ರಾಯೋಜಕರು, ನಿರ್ಮಾಣಕ್ಕೆ ಸಹಕರಿಸಿದ ಕಾರ್ಮಿಕರು ಹಾಗೂ ಸಹಾಯ ಕರನ್ನು ಸನ್ಮಾನಿಸಲಾಗುವುದು. ಜೊತೆಗೆ ಫಲಾನುಭವಿಗಳಿಗೆ ಒಂದೊಂದು ಕಸಿ ಮಾವಿನ ಗಿಡವನ್ನು ವಿತರಿಸಲಾ ಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಪ್ರೊ. ನಾರಾಯಣ ಎಂ ಹೆಗಡೆ, ಪ್ರೊ.ಸದಾಶಿವ ರಾವ್ ಮತ್ತು ವಿದ್ಯಾ ಪ್ರಸಾದ್ ಉಪಸ್ಥಿತರಿದ್ದರು.






