2nd PUC Result-2026| ಉಡುಪಿ ಜಿಲ್ಲೆಯ 25 ಕಾಲೇಜುಗಳಿಗೆ ಶೇ.100 ಫಲಿತಾಂಶ

ಸಾಂದರ್ಭಿಕ ಚಿತ್ರ | PC : Gemini AI
ಉಡುಪಿ, ಎ.8: ಎಂಟು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಒಟ್ಟು 25 ಕಾಲೇಜುಗಳು ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಗೊಳ್ಳುವ ಮೂಲಕ ಶೇ.100ರ ಫಲಿತಾಂಶವನ್ನು ದಾಖಲಿಸಿವೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರ್ಣೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಬ್ರಹ್ಮಾವರ, ಸರಕಾರಿ ಪಿಯು ಕಾಲೇಜು ಮುದರಂಗಡಿ, ಸರಕಾರಿ ಪಿಯು ಕಾಲೇಜು ಪಲಿಮಾರು, ಸರಕಾರಿ ಪದವಿ ಪೂರ್ವ ಕಾಲೇಜು ಪಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಿಯಾರು, ಸರಕಾರಿ ಪ.ಪೂ.ಕಾಲೇಜು ವಂಡ್ಸೆ ಹಾಗೂ ಸರಕಾರಿ ಪ.ಪೂ.ಕಾಲೇಜು ತೆಕ್ಕಟ್ಟೆ ಶೇ.100 ಫಲಿತಾಂಶ ದಾಖಲಿಸಿರುವ ಸರಕಾರಿ ವಿದ್ಯಾಸಂಸ್ಥೆಗಳಾಗಿವೆ.
ಇನ್ನುಳಿದಂತೆ ಶೇ.100 ಫಲಿತಾಂಶ ದಾಖಲಿಸಿರುವ ಜಿಲ್ಲೆಯ 17 ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ವಿವರ ಹೀಗಿದೆ.
ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಕಟಪಾಡಿ, ಎಸ್.ಆರ್. ಪದವಿ ಪೂರ್ವ ಕಾಲೇಜು ಹೆಬ್ರಿ, ಸೈಂಟ್ ಜಾನ್ಸ್ ಪಿಯು ಕಾಲೇಜು ಶಂಕರಪುರ, ಕ್ರೈಸ್ಟ್ ಕಿಂಗ್ ಪ.ಪೂ.ಕಾಲೇಜು ಕಾರ್ಕಳ, ಎಸ್.ಎನ್.ವಿ. ಪದವಿ ಪೂರ್ವ ಕಾಲೇಜು ಕಾರ್ಕಳ, ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಾರ್ಕಳ, ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ, ತೌಹೀದ್ ಪದವಿ ಪೂರ್ವ ಕಾಲೇಜು ಗಂಗೊಳ್ಳಿ.
ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ, ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ, ಗುರುಕುಲ ಪದವಿ ಪೂರ್ವ ಕಾಲೇಜು ಕೋಟೇಶ್ವರ, ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ವಿದ್ಯೋದಯ ಪ.ಪೂ.ಕಾಲೇಜು ಉಡುಪಿ, ತ್ರಿಷಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಜ್ಞಾನಸುಧಾ ಪದವಿ ಪರ್ವ ಕಾಲೇಜು ಉಡುಪಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮಣಿಪಾಲ.
ಹೆಜಮಾಡಿಗೆ ಕನಿಷ್ಠ ಫಲಿತಾಂಶ: ಜಿಲ್ಲೆಯಲ್ಲಿ ಯಾವುದೇ ಸಂಸ್ಥೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ. ಆದರೆ ಹೆಜಮಾಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಶೇ.33.33 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಅತಿ ಕನಿಷ್ಠ ಫಲಿತಾಂಶ ದಾಖಲಿಸಿದೆ. ಇಲ್ಲಿ ಪರೀಕ್ಷೆಗೆ ಕುಳಿತ 9 ಮಂದಿ ವಿದ್ಯಾರ್ಥಿಗಳಲ್ಲಿ ಮೂವರು ಮಾತ್ರ ತೇರ್ಗಡೆ ಗೊಂಡಿದ್ದು ಆರು ಮಂದಿ ಅನುತ್ತೀರ್ಣ ಗೊಂಡಿದ್ದಾರೆ.
ಖಾಸಗಿ ಶಾಲೆಗಳ ಪೈಕಿ ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಪದವಿ ಪೂರ್ವ ಕಾಲೇಜು ಶೇ.53.85 ಫಲಿತಾಂಶ ದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಪರೀಕ್ಷೆ ಬರೆದ 13 ಮಂದಿಯಲ್ಲಿ 7 ಮಂದಿ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.
ಒಟ್ಟಾರೆಯಾಗಿ ಈ ಬಾರಿ ಪರೀಕ್ಷೆ ಬರೆದ 16,626 ಮಂದಿ ವಿದ್ಯಾರ್ಥಿಗಳ ಪೈಕಿ 16,038 ಮಂದಿ ತೇರ್ಗಡೆಗೊಂಡಿದ್ದು, 587 ಮಂದಿ ಅನುತ್ತೀರ್ಣರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಸಾಧನೆ
ಖಾಸಗಿ ಶಾಲೆಗಳ ಪೈಕಿ ಕಾರ್ಕಳದ ಕ್ರಿಯೆಟೀವ್ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 951 ಮಂದಿ ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಗೊಳ್ಳುವ ಮೂಲಕ ಶೇ.100 ಫಲಿತಾಂಶ ಪಡೆದಿದೆ. ಹಾಗೆಯೇ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜಿ ನಿಂದ ಪರೀಕ್ಷೆಗೆ ಕುಳಿತ ಎಲ್ಲಾ 649 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಪಡೆದಿದೆ. ಅಲ್ಲದೇ ಕಾಲೇಜಿನಿಂದ ಮೂವರು ರಾಜ್ಯದ ಟಾಪರ್ಗಳಲ್ಲಿ ಸ್ಥಾನ ಪೆದಿದ್ದಾರೆ.
ಅದೇ ರೀತಿ ಕಾರ್ಕಳದ ಜ್ಞಾನಸುಧಾ ಕಾಲೇಜಿನಿಂದ ಪರೀಕ್ಷೆ ಬರೆದ 575 ಮಂದಿಯೂ ಉತ್ತೀರ್ಣರಾಗಿದ್ದರೆ, ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನಿಂದ ಪರೀಕ್ಷೆ ಬರೆದ ಎಲ್ಲಾ 538 ಮಂದಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನಲ್ಲಿ 568 ಮಂದಿ ಪರೀಕ್ಷೆ ಬರೆದಿದ್ದು 566 ಮಂದಿ ತೇರ್ಗಡೆಗೊಂಡು ಶೇ.99.65 ಫಲಿತಾಂಶ ಪಡೆದಿದೆ. ಉಡುಪಿಯ ವಿದ್ಯೋದಯ ಪಿಯು ಕಾಲೇಜಿನಲ್ಲಿ 368 ಮಂದಿ ವಿದ್ಯಾರ್ಥಿ ಗಳೆಲ್ಲರೂ ತೇರ್ಗಡೆಗೊಂಡಿದ್ದಾರೆ.
ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆದ 689 ಮಂದಿಯ ಪೈಕಿ 686 ಮಂದಿ (ಶೇ.99.56) ತೇರ್ಗಡೆಗೊಂಡಿದ್ದಾರೆ. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ 596 ಮಂದಿ ಪರೀಕ್ಷೆ ಬರೆದವರ ಪೈಕಿ 548 ಮಂದಿ (ಶೇ.91.96), ಉಡುಪಿಯ ಎಂಜಿಎಂ ಪ.ಪೂ. ಕಾಲೇಜಿನಲ್ಲಿ 591 ಮಂದಿ ವಿದ್ಯಾರ್ಥಿಗಳ ಪೈಕಿ 584 ಮಂದಿ (ಶೇ.98.82) ತೇರ್ಗಡೆಗೊಂಡಿದ್ದಾರೆ.






