ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿಗೆ ಸತತ ಮೂರನೇ ಬಾರಿ ದ್ವಿತೀಯ ಸ್ಥಾನ

ಉಡುಪಿ, ಎ.11: ನಿನ್ನೆ (ಎ.10) ಪ್ರಕಟಗೊಂಡ ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ.
ಕೊರೋನದ ಬಳಿಕ ಕಳೆದ ಮೂರು ವರ್ಷಗಳಲ್ಲಿ- 2022, 2023, 2024- ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಳ್ಳುತಿದ್ದರೆ, ತೀವ್ರ ಸ್ಪರ್ಧೆಯ ಹೊರತಾಗಿಯೂ ಉಡುಪಿ ಜಿಲ್ಲೆಯ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಶೇ.97.37ರ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರೆ, ಉಡುಪಿ ಶೇ.96.80 ಸಾಧನೆಯೊಂದಿಗೆ ಎರಡನೇ ಸ್ಥಾನಿಯಾಗಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಶೇ.95.33ರೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಉಡುಪಿ ಜಿಲ್ಲೆ ಶೇ.95.24 (ಶೇ.0.11) ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು.
ರಾಜ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದ 35 ಪದವಿ ಪೂರ್ವ ಕಾಲೇಜುಗಳಲ್ಲಿ ಒಂದು (2 ಸರಕಾರಿ, 6 ಅನುದಾನಿತ, 26 ಅನುದಾನ ರಹಿತ, 1 ವಿಭಜಿತ ಕಾಲೇಜು) ಉಡುಪಿ ಜಿಲ್ಲೆಗೆ ಸೇರಿದೆ. ಕಾರ್ಕಳದ ಶಿರ್ಡಿ ಸಾಯಿ ಪದವಿ ಪೂರ್ವ ಕಾಲೇಜು ಈ ಅಪಖ್ಯಾತಿಗೆ ಒಳಗಾಗಿದೆ.
ಮೊದಲ ಬಾರಿ ಪರೀಕ್ಷೆ ಬರೆದ ಜಿಲ್ಲೆಯ ಒಟ್ಟು 15,328 ವಿದ್ಯಾರ್ಥಿಗಳಲ್ಲಿ 14,837 ಮಂದಿ ತೇರ್ಗಡೆಗೊಂಡಿದ್ದು, ಶೇ.96.8 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ, ಮರು ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 15,964 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ 15,189 ಮಂದಿ ತೇರ್ಗಡೆಗೊಂಡು ಶೇ.95.15 ಫಲಿತಾಂಶ ದಾಖಲಾಗಿದೆ.
ಜಿಲ್ಲೆಯಲ್ಲಿ 7,719 ಮಂದಿ ಬಾಲಕರಲ್ಲಿ 72,223 ಮಂದಿ (ಶೇ.93.57) ಹಾಗೂ 8,245 ಮಂದಿ ಬಾಲಕಿಯರಲ್ಲಿ 7,966 ಮಂದಿ (ಶೇ.96.62) ತೇರ್ಗಡೆಗೊಂಡಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 13,944 ವಿದ್ಯಾರ್ಥಿಗಳಲ್ಲಿ 13,439 ಮಂದಿ (ಶೇ.96.38) ಹಾಗೂ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ 2020 ವಿದ್ಯಾರ್ಥಿಗಳಲ್ಲಿ 1750 ಮಂದಿ (ಶೇ.86.63) ತೇರ್ಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಬರೆದ 1,061 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ 966 (ಶೇ.91.05) ಮಂದಿ ಹಾಗೂ 763 ಮಂದಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ 713 ಮಂದಿ (93.45) ತೇರ್ಗಡೆ ಗೊಂಡಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 7349 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 7154 ಮಂದಿ (ಶೇ.97.35) ಉತ್ತೀರ್ಣರಾದರೆ, 7979 ಮಂದಿ ನಗರದ ವಿದ್ಯಾರ್ಥಿಗಳ ಪೈಕಿ 7683 ಮಂದಿ (ಶೇ.96.29) ಉತ್ತೀರ್ಣರಾಗಿದ್ದಾರೆ.







