3ನೇ ದಿನದಲ್ಲಿ ಮುಂದುವರಿದ ಕೊರಗರ ಅಹೋರಾತ್ರಿ ಧರಣಿ: ಸ್ಥಳದಲ್ಲಿ ಬುಟ್ಟಿ ತಯಾರಿಕೆಯಲ್ಲಿ ತೊಡಗಿದ ಮಹಿಳೆಯರು

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಯೂ ಸೇರಿದಂತೆ ತಮ್ಮ ವಿವಿಧ ಭೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳದ ವತಿಯಿಂದ ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನವಾದ ಇಂದು ಕೂಡ ಮುಂದುವರಿಯಿತು.
ಮೊದಲ ದಿನ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಧರಣಿ ನಿರತರ ಬಳಿ ಬಂದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದನ್ನು ಹೊರತು ಪಡಿಸಿ ಈವರೆಗೆ ಯಾರೂ ಪ್ರತಿಭಟನಕಾರರನ್ನು ಭೇಟಿಯಾಗಿಲ್ಲ. ಇಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿರುವ ಮಾಹಿತಿ ಇವರಿಗೆ ತಲುಪಿದೆ.
ಇಂದು ಸಹ ಪ್ರತಿಭಟನಕಾರರು ಧರಣಿ ಕುಳಿತ ಸ್ಥಳದ ಸಮೀಪ ಅಡುಗೆ ತಯಾರಿಸಿ, ಊಟ- ಉಪಹಾರ ಮಾಡುತಿದ್ದಾರೆ. ಆಗಾಗ ಸುರಿಯುವ ಭಾರೀ ಮಳೆಯ ನಡುವೆಯೇ ಅವರು ಪೆಂಡಾಲ್‌ನಲ್ಲೇ ರಾತ್ರಿಯನ್ನು ಕಳೆಯುತಿದ್ದಾರೆ.
ವಿಶೇಷವೆಂದರೆ ಇಂದು ಕೊರಗ ಮಹಿಳೆಯರು ಸ್ಥಳದಲ್ಲಿ ತಮ್ಮ ಕುಲಕಸುಬನ್ನು ಮಾಡಲು ಪ್ರಾರಂಭಿಸಿದ್ದಾರೆ. ಊರಿನಿಂದ ತಂದಿರುವ ಬೀಳಲು ಹಾಗೂ ಇತರ ವಸ್ತುಗಳಿಂದ ಅವರು ಬುಟ್ಟಿ ಹೆಣೆಯುತಿದ್ದಾರೆ. ಯುವಕರು ಸ್ಥಳದಲ್ಲಿ ಡೋಲು ಬಾರಿಸಿ ಗಮನ ಸೆಳೆದರು.
ನಮ್ಮ ಬೇಡಿಕೆ ಈಡೇರುವವರೆಗೆ ನಾವು ಧರಣಿ ಕುಳಿತ ಜಾಗದಿಂದ ಕದಲುವುದಿಲ್ಲ. ನಮ್ಮ ಹೋರಾಟ ಇನ್ನಷ್ಟು ತೀವ್ರ ಗೊಳ್ಳಲಿದೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ ಸಂಜೆ ‘ವಾರ್ತಾಭಾರತಿ’ಗೆ ತಿಳಿಸಿದರು.







