ಮಾ.3ರಿಂದ ಪರೀಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ಉಡುಪಿ, ಫೆ.28: ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿರುವ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ, ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭವು ಮಾ.3ರಿಂದ 6ರವರೆಗೆ ನಡೆಯಲಿದೆ ಎಂದು ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ವಾಡಿತ್ತಾಯ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ವೇದಮೂರ್ತಿ ಹೆರ್ಗ ಜಯರಾಮ ತಂತ್ರಿ ನೇತೃತ್ವದಲ್ಲಿ ಈ ಬ್ರಹ್ಮಕಲಶೋತ್ಸವ ನೆರವೇರಲಿದೆ. ಮಾ.2ರಂದು ಸಂಜೆ 4 ಗಂಟೆಗೆ ಪರ್ಕಳ ಬಿ.ಎಂ.ಶಾಲಾ ಆವರಣದಿಂದ ಹೊರೆಕಾಣಿಕೆ ದೇವಸ್ಥಾನಕ್ಕೆ ಆಗಮಿಸಲಿದೆ ಎಂದರು.
ಮಾ.3ರಂದು ಬೆಳಿಗ್ಗೆ ಗಣಪತಿಯಾಗದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ ಕಛೇರಿ ಹಾಗೂ ತುಳು, ಕನ್ನಡ ನಾಟಕಗಳು, ಗೀತಾ ಸಾಹಿತ್ಯ ಸಂಭ್ರಮ ಜರಗಲಿದೆ. ಮಾ.6ರಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಧರ್ಮಾಧಿಕಾರಿ ಡಾ..ಡಿ.ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಬ್ರಹ್ಮಕುಂಭಾಭಿಷೇಕವು ಜರಗಲಿದೆ.
ಮಧ್ಯಾಹ್ನ 12 ಗಂಟೆಗೆ ದೇವರ ಮಹಾಪ್ರಸನ್ನ ಪೂಜೆಯು ಜರುಗಲಿದೆ. ನಂತರ 12.30ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ಕ್ಕೆ ಜರುಗುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದತೀರ್ಥ ಸ್ವಾಮೀಜಿ, ಶೀರೂರು ಮಠಾಧೀಶ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ವಹಿಸಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಕಾರ್ಯದರ್ಶಿ ಡಾ.ಗೋಪಾಲ ಪೂಜಾರಿ, ಪ್ರವೀಣ್ ಕುಮಾರ್, ಡಾ.ಶೋಭಿತ್ ಶೆಟ್ಟಿ, ಡಾ.ಪೂಜಾ ಉಪಸ್ಥಿತರಿದ್ದರು.







