ಆ.3ರಂದು ಉಡುಪಿಯಲ್ಲಿ ಬನ್ನಂಜೆ 90 ಉಡುಪಿ ನಮನ
ಉಡುಪಿ: ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ‘ಬನ್ನಂಜೆ -90’ ಉಡುಪಿ ನಮನ ಕಾರ್ಯಕ್ರಮವು ಆ.3ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ರವಿರಾಜ್ ಎಚ್.ಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 8:30ಕ್ಕೆ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಕಾಲೇಜಿನವರೆಗೆ ನಡೆಯಲಿರುವ ಮೆರವಣಿಗೆಗೆ ನಾಡೋಜ ಪ್ರೊ.ಕೆ.ಪಿ.ರಾವ್ ಚಾಲನೆ ನೀಡಲಿರುವರು. ಬೆಳಗ್ಗೆ 10 ಗಂಟೆಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದರು ಉದ್ಘಾಟಿಸಲಿದ್ದು, ಛಾಯಾಚಿತ್ರ ಹಾಗೂ ಬನ್ನಂಜೆ ಬಳಸುತ್ತಿದ್ದ ವಸ್ತು ಪ್ರದರ್ಶನವನ್ನು ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವೈದೇಹಿ ವಹಿಸಲಿರುವರು.
ನಂತರ ಬೆಳಗ್ಗೆ ಹಾಗೂ ಮಧ್ಯಾಹ್ನ ನಾಡಿನ ಹಿರಿಯ ವಿದ್ವಾಂಸರಿಂದ ಬನ್ನಂಜೆಯವರ ಕುರಿತು 2 ಗೋಷ್ಠಿ ಗಳು ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ವಿದ್ಯಾಭೂಷಣರ ಅಧ್ಯಕ್ಷತೆಯಲ್ಲಿ ಗಂಗಾವತಿ ಪ್ರಾಣೇಶ್ ಸಮಾರೋಪ ಭಾಷಣ ಮಾಡಲಿರುವರು. ಸಭಾ ಕಾರ್ಯಕ್ರಮದ ನಂತರ ಸಂಜೆ 5:30ಕ್ಕೆ ವಿದ್ಯಾಭೂಷಣರಿಂದ ಆಚಾರ್ಯರ ಹಾಡುಗಳ ಹಾಡು, ನಾದ ಲಹರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮತಿಯ ಪ್ರಮುಖರಾದ ರಂಗ ಪೈ, ವಿಶ್ವನಾಥ ಶೆಣೈ, ಜನಾರ್ದನ ಕೊಡವೂರು, ಸದಾಶಿವ ರಾವ್ ಉಪಸ್ಥಿತರಿದ್ದರು.







