ಪ್ರತ್ಯೇಕ 3 ಪ್ರಕರಣ: ಲಕ್ಷಾಂತರ ರೂ. ಆನ್‌ಲೈನ್ ವಂಚನೆ

ಮಲ್ಪೆ, ಜು.23: ಬಡಾನಿಡಿಯೂರಿನ ಕವಿತಾ ಪಿ.(36) ಎಂಬವರಿಗೆ ಅಪರಿಚಿತರು ಸಂದೇಶ ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದ್ದು, ಅದರಂತೆ ಕವಿತಾ ವಿವಿಧ ಹಂತಗಳಲ್ಲಿ 3,93,129ರೂ. ಹಣವನ್ನು ಆನ್‌ಲೈನ್ ಮೂಲಕ ಆರೋಪಿಗಳ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ಗಳು ಕವಿತಾ ಅವರಿಗೆ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿದಿಯೂರಿನ ರಾಘವೇಂದ್ರ ಮತ್ತಪ್ಪ(73) ಎಂಬವರಿಗೆ ಆರೋಪಿಗಳು ಕರೆ ಮಾಡಿ ಶೇರು ಖರೀದಿಸಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದರು. ಅದರಂತೆ ರಾಘವೇಂದ್ರ ಆನ್‌ಲೈನ್ ಮೂಲಕ 50,000ರೂ. ಹಣವನ್ನು ವರ್ಗಾಯಿಸಿ ಮೋಸ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕುಂದಾಪುರದ ಸುಧಾಕರ (54) ಎಂಬವರಿಗೆ ಜು.21ರಂದು ಮೊಬೈಲ್‌ಗೆ ಸಂದೇಶ ಬಂದಿದ್ದು, ಆ ಲಿಂಕ್‌ನ್ನು ಒತ್ತಿದ ಪರಿಣಾಮ ಅವರ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 1,87,044 ರೂ. ಹಣವನ್ನು ಮೋಸಮಾಡಿ ಪಡೆದುಕೊಂಡು ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





