ಪ್ರತ್ಯೇಕ 3 ಪ್ರಕರಣ: 10.82ಲಕ್ಷ ರೂ. ಆನ್‌ಲೈನ್ ವಂಚನೆ

ಉಡುಪಿ, ಆ.5: ಉಡುಪಿ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಒಟ್ಟು ಮೂರು ಪ್ರಕರಣ ಗಳಲ್ಲಿ ಒಟ್ಟು 10.82ಲಕ್ಷ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ವರದಿಯಾಗಿದೆ.
ಪ್ರವೀಣ್ ಎಂಬವರಿಗೆ ಜು.31ರಂದು ಅಪರಿಚಿತ ವ್ಯಕ್ತಿಯು ಕರೆ ಮಾಡಿ ಕ್ರೆಡಿಟ್ ಕಾರ್ಡಿನ ಕೆವೈಸಿಯನ್ನು ಅಪ್‌ಡೇಟ್ ಮಾಡಬೇಕಾಗಿದೆ ಎಂದು ಹೇಳಿ ನಕಲಿ ಲಿಂಕ್ ಕಳುಹಿಸಿದ್ದು, ಆ ಮೂಲಕ ಕ್ರೆಡಿಟ್ ಕಾರ್ಡ್‌ನಿಂದ 33,700ರೂ. ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ರೇಣುಕಾ ಎಂಬವರಿಗೆ ಜು.18ರಂದು ಅಪರಿಚಿತರು ಲಿಂಕ್ ಕಳುಹಿಸಿ ಟಾಸ್ಕ್‌ಗಳ ಮೂಲಕ ಹೆಚ್ಚು ಹಣ ಗಳಿಸಬಹುದಾಗಿ ನಂಬಿಸಿದ್ದು, ಅದರಂತೆ ರೇಣುಕಾ, ಒಟ್ಟು 7,63,080ರೂ. ಹಣವನ್ನು ಹಂತ ಹಂತವಾಗಿ ಅಪರಿಚಿತ ಖಾತೆಗೆ ಹಾಕಿದ್ದರು. ಈ ಮೂಲಕ ಅವರಿಗೆ ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಮಲ್ಲಪ್ಪಎಂಬವರಿಗೆ ಜು.24ರಂದು ಅಪರಿಚಿತ ವ್ಯಕ್ತಿಯು ಕರೆ ಮಾಡಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಿವಿಧ ಹಂತಗಳಲ್ಲಿ ಒಟ್ಟು 2,86,000 ರೂ. ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







