ಆ.30ರಂದು ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ

ಉಡುಪಿ, ಆ.27: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಆಶ್ರಯದಲ್ಲಿ ಶ್ರೀನಾರಾಯಣ ಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಪ್ರಯುಕ್ತ ‘ಗುರು ಸಂದೇಶ ಸಾಮರಸ್ಯ ಜಾಥಾ’ ಹಾಗೂ ರಾಜ್ಯಮಟ್ಟದ ಭಾಷಣ ಸ್ಪರ್ಧೆಯನ್ನು ಆ.30ರಂದು ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ನಾರಾಯಣಗುರು ಆಡಿಟೋರಿಯಂನಲ್ಲಿ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ರಘುಪತಿ ಭಟ್ ಭಾಗವಹಿಸಲಿರು ವರು ಎಂದರು.
ಮಧ್ಯಾಹ್ನ 1ಗಂಟೆಗೆ ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಗುರು ಸಂದೇಶ ಸಾಮರಸ್ಯ ಜಾಥಾಕ್ಕೆ ಚಾಲನೆ ನೀಡಲಾಗುವುದು. ಜಾಥಾಕ್ಕೆ ಸಾಧಕಾರದ ವಿದುಷಿ ದೀಕ್ಷಾ, ವಿದ್ಯಾರ್ಥಿಗಳಾದ ದಿಶಾ, ಪ್ರೀತಂ ಪೂಜಾರಿ, ತನುಶ್ರೀ ಪಿತ್ರೋಡಿ ಹಾಗೂ ರಾಷ್ಟ್ರೀಯ ಕರಾಟೆಪಟು ಛಾಯಾ ಎಸ್.ಪೂಜಾರಿ ಚಾಲನೆ ನೀಡಲಿದ್ದಾರೆ.
ಬನ್ನಂಜೆ ಬಿಲ್ಲವ ಸಂಘದಿಂದ ಆರಂಭಗೊಳ್ಳುವ ಜಾಥಾವು ಎಸ್ಪಿ ಆಫೀಸ್ ರಸ್ತೆ, ಅಂಬಲಪಾಡಿ ಜಂಕ್ಷನ್, ಕಿನ್ನಿಮೂಲ್ಕಿ, ಬಲಾಯಿಪಾದೆ, ಉದ್ಯಾವರ, ಕಟಪಾಡಿ, ಕಾಪು, ಮೂಳೂರು, ಉಚ್ಚಿಲ, ಪಡುಬಿದ್ರಿ, ಹೆಜಮಾಡಿ ಮಾರ್ಗವಾಗಿ ಸಾಗಿಬಂದು ಕಟಪಾಡಿಯ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಆರೋಗ್ಯ ಸಚಿವ ಯು.ಟಿ ಖಾದರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ಯತ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮೊದಲಾದವರು ಭಾಗವಹಿಸಲಿರುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮಲ್ಪೆ, ವಿಜಯ ಕೋಟ್ಯಾನ್ ಪಿತ್ರೋಡಿ, ಗೌರವ ಸಲಹೆಗಾರರಾದ ಸುಧಾಕರ್ ಡಿ.ಅಮೀನ್ ಉಪಸ್ಥಿತರಿದ್ದರು.






