ಆ.30, 31: ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಉಡುಪಿ, ಆ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಆಗಸ್ಟ್ 30 ಮತ್ತು 31ರಂದು ಉಡುಪಿಯಲ್ಲಿ ನಡೆಯಲಿದೆ.
ಈಗಾಗಲೇ ನಡೆದಿರುವ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಆ.30ರಂದು ಉಡುಪಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಯೋಗ, ಆ.31ರಂದು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ತ್ರೋಬಾಲ್, ವಾಲಿಬಾಲ್, ಕಬಡ್ಡಿ, ಫುಟ್ಬಾಲ್, ಹ್ಯಾಂಡ್‌ಬಾಲ್, ಕುಸ್ತಿ, ಹಾಕಿ, ಬಾಸ್ಕೆಟ್‌ಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.
ಜಿಲ್ಲಾ ಮಟ್ಟದಲ್ಲಿ ನೇರವಾಗಿ ಸಂಘಟಿಸಲಾಗುವ ಕ್ರೀಡೆಗಳಾದ ಬಾಸ್ಕೆಟ್ ಬಾಲ್, ಹ್ಯಾಂಡ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಶಟ್ಲ್ ಬ್ಯಾಡ್ಮಿಂಟನ್, ಟೇಬಲ್‌ಟೆನಿಸ್, ಕುಸ್ತಿ ಹಾಗೂ ಹಾಕಿ ಕ್ರೀಡೆಗಳಿಗೆ ಆಗಸ್ಟ್ 29ರ ಒಳಗೆ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ಕ್ರೀಡಾಕೂಟದ ಉದ್ಘಾಟನೆ: ಕ್ರೀಡಾಕೂಟವನ್ನು ಆ.31ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿ ಸಲಿದ್ದು, ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಕ್ರೀಡಾಕೂಟದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ. ಸಂಖ್ಯೆ:0820-2521324ನ್ನು ಸಂಪರ್ಕಿಸಬಹುದು. ಕ್ರೀಡಾಪಟುಗಳು ನಿಗದಿತ ದಿನದಂದು ಬೆಳಗ್ಗೆ 9:00 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳುವಂತೆ ಪ್ರಕಟಣೆ ತಿಳಿಸಿದೆ.







