300 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಕೆ: ಕಲ್ಲೇಶ್ ಪ್ರಸಾದ್

ಉಡುಪಿ, ಎ.18: ಈ ಬಾರಿ ರೈತರಿಗೆ ವಿತರಿಸಲು 300 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಮೇ ತಿಂಗಳಲ್ಲಿ ಇದನ್ನು ವಿತರಿಸಲಾಗುತ್ತದೆ. ಕಳೆದ ಬಾರಿ 250 ಕ್ವಿಂಟಾಲ್ ಬೀಜ ವಿತರಿಸಿರುವುದ ರಿಂದ ಈ ಬಾರಿ ಹೆಚ್ಚುವರಿ 50 ಕ್ವಿಂಟಾಲ್ ಪ್ರಸ್ತಾವ ಸಲ್ಲಿಸಲಾಗಿದೆ. 150 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಇದರ ಯಾವುದೇ ಕೊರತೆ ಇಲ್ಲ ಎಂದು ಉಡುಪಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕಲ್ಲೇಶ್ ಪ್ರಸಾದ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ಯಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಮಳೆಗಾಲ ಪೂರ್ವಸಿದ್ಧತಾ ಸಭೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಇದ್ದು, ಉಡುಪಿಯಲ್ಲಿ ಮಾತ್ರ ಇರಲಿಲ್ಲ. ಇದೀಗ ಉಡುಪಿಗೂ ಮಂಜೂರಾಗಿ ವಾರಂಬಳ್ಳಿ ಗ್ರಾಮದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಉಡುಪಿ ತಾಲೂಕಿನಲ್ಲಿ 5587 ಮಂದಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ ಐಟಿ ಪಾವತಿದಾರರು ಹಾಗೂ ಎಪಿಎಲ್ ಪಡಿತರ ಚೀಟಿಯಲ್ಲಿ ಇರುವವರನ್ನು ಕೈಬಿಡಲು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಇದರಲ್ಲಿ 1339 ಮಂದಿಯ ಪರಿಶೀಲನೆ ಕಾರ್ಯ ಮಾಡಲಾಗಿದೆ. ಉಳಿದವರ ಪರಿಶೀಲನಾ ಕಾರ್ಯ ಇನ್ನೂ ಮಾಡಬೇಕಾಗಿದೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಳೆಗಾಲಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಆಯಾ ಗ್ರಾಪಂಗಳು ಮಾಡಬೇಕು. ಮರಗಳ ತೆರವು, ವಿದ್ಯುತ್ ತಂತಿಗಳ ಪರಿಶೀಲನೆ, ಚರಂಡಿ ಹೂಳೆತ್ತುವ ಕಾರ್ಯ ಮಾಡ ಬೇಕು. ಮಳೆಗಾಲದಲ್ಲಿ ಅರಣ್ಯ, ಮೆಸ್ಕಾಂ, ಅಗ್ನಿಶಾಮಕದಳ ಅಧಿಕಾರಿಗಳ ಸಂಪರ್ಕವನ್ನು ಇಟ್ಟುಕೊಂಡು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕು ಎಂದು ಸೂಚನೆ ನೀಡಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ ಮಾತನಾಡಿ, ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಥಮಿಕ ಶಾಲಾ ವಿಭಾಗದ ಎರಡು ತರಗತಿ ಕೊಠಡಿಗಳು ಸೋರುತ್ತಿದ್ದು, ಇದರ ದುರಸ್ತಿಗೆ ಅನುದಾನ ಬೇಕಾಗಿದೆ ಎಂದು ಸಭೆಗೆ ತಿಳಿಸಿದರು. ಮಕ್ಕಳ ರಕ್ಷಣಾ ಆಯೋಗ ಶಾಲೆ ಆವರಣದಲ್ಲಿ ಇರುವ ಅಪಾಯಕಾರಿ ಮರಗಳ ತೆರವು ಹಾಗೂ ವಿದ್ಯುತ್ ತಂತಿಗಳ ವರ್ಗಾವಣೆಗೆ ಸೂಚನೆ ನೀಡಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯನ್ನು ವಾರಾಹಿ ಯೋಜನೆ ಹಾಗೂ ಅದಾನಿ ಗ್ಯಾಸ್ ಪೈಪ್‌ಲೈನ್‌ಗಾಗಿ ಅಗೆಯಲಾಗಿದ್ದು, ಕೂಡಲೇ ಇದರ ದುರಸ್ತಿ ಮಾಡುವಂತೆ ಶಾಸಕರು ಸೂಚನೆ ನೀಡಿದರು.
ಸೋಮವಾರ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅದಾನಿ ಕಂಪೆನಿಯ ಅಧಿಕಾರಿಗಳು ತಿಳಿಸಿದರು. ಯಾವುದೇ ಕಾರಣಕ್ಕೂ ಮುಂದಿನ ಮಳೆಗಾಲದಲ್ಲಿ ಈ ರಸ್ತೆ ಸಿಂಕ್ ಆಗದ ರೀತಿಯಲ್ಲಿ ಕಾಮಗಾರಿ ಮಾಡಬೇಕು. ಕಾಮಗಾರಿ ಮುಗಿದ ಬಳಿಕ ನಗರಸಭೆ ಅಧಿಕಾರಿ ಈ ರಸ್ತೆಯನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಶಾಸಕರು ತಿಳಿಸಿದರು.
ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿ ರಂಗ ಮಂದಿರ, ರಸ್ತೆ ಸೇರಿದಂತೆ ಒಟ್ಟು 63 ಕಾಮಗಾರಿಗಳಲ್ಲಿ 35 ಪ್ರಗತಿಯಲ್ಲಿದೆ. ಐದು ಕಾಮಗಾರಿಗಳಿಗೆ ಅಂದಾಜು ವೆಚ್ಚ ಆಗಬೇಕಾಗಿದೆ. 20 ಕಾಮಗಾರಿಯನ್ನು ಇನ್ನಷ್ಟೇ ಆರಂಭಿಸ ಬೇಕಾಗಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು.
ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ನಿರ್ದೇಶಕಿ ಫರ್ಝಾನ ಹಾಗೂ ತಾಲೂಕು ಅಧಿಕಾರಿಗಳು, ಪಂಚಾಯಕ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.






