37 ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ಆಶಯ ಪತ್ರ ವಿತರಣೆ: ಸಿಇಓ ಬಾಯಲ್

ಕುಂದಾಪುರ: ಜಿಲ್ಲೆಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸುವ ಕುರಿತು ಈಗಾಗಲೇ ಆಶಯ ಪತ್ರ ನೀಡಲಾಗಿದೆ. ಇನ್ನುಳಿದ ಕೆಲವು ಪ್ರದೇಶಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೂಳೆತ್ತುವ ಸಂಬಂಧ ಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮ ಪಂಚಾಯತ್‌ಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ನೀಡಿರುವ ಆಶಯ ಪತ್ರಗಳ ಪ್ರಗತಿ ಪರಿಶೀಲನೆ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.
37 ಬ್ಲಾಕ್‌ಗಳನ್ನು ಗುರುತಿಸಿ ಅವರಿಗೆ ಆಶಯ ಪತ್ರ ನೀಡಲಾಗಿದೆ. 37 ಪಂಚಾಯತ್‌ಗಳ ಪೈಕಿ 22 ಪಂಚಾಯತ್‌ಗಳು ಕಾರ್ಯನಿರ್ವಹಿಸುತ್ತಿದೆ. ಕೆಲವೊಂದು ಪಂಚಾಯತಿಗಳು ಶುಲ್ಕ ಪಾವತಿಸಿಲ್ಲ. ಕಾವ್ರಾಡಿ, ಯಡ್ತಾಡಿ, ವಡ್ಡರ್ಸೆ, ಉಳ್ತೂರು, ಕೆದೂರು, ಬೇಳೂರು ಗ್ರಾಮ ಪಂಚಾಯತಿಗಳಿಗೆ ಹೂಳೆತ್ತಲು ಅವಕಾಶ ನೀಡಲಾಗಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹೂಳೆತ್ತಲು ಅವಕಾಶ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ ತಿಳಿಸಿದರು.
ಎಲ್ಲಾ ಕಡೆಗಳಲ್ಲಿ ಡ್ಯಾಂ ಪಕ್ಕದಲ್ಲಿ ಹೂಳು ಶೇಖರಣೆಗೊಂಡಿದ್ದು, ಇಲ್ಲಿ ಹೂಳೆತ್ತಲು ಸಣ್ಣ ನೀರಾವರಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ. ಸೇತುವೆ ಮತ್ತು ಡ್ಯಾಂನಿಂದ 250 ಮೀಟರ್ ಬಿಟ್ಟು ಹೂಳೆತ್ತ ಬೇಕೆಂದು ಸಣ್ಣ ನೀರಾವರಿ ಇಲಾಖೆ ಕಾನೂನು ಇದ್ದು, ಸಣ್ಣ ನೀರಾವರಿ ಇಲಾಖೆಯವರು ಅನುಮತಿ ನೀಡಿದರೆ ಇಂತಹ ಪ್ರದೇಶಗಳಲ್ಲಿ ಹೂಳೆತ್ತಲು ಅವಕಾಶ ಕೊಡಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂಧ್ಯಾ ಹೇಳಿದರು.
ಅಧಿಕಾರಿಗಳಿಗೆ ತೀವ್ರ ತರಾಟೆ: ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದು ಮರಳು ಗಣಿಗಾರಿಕೆ ಅಲ್ಲ, ಕೇವಲ ಹೂಳೆತ್ತವುದು. ಅದಕ್ಕೆ ನೀವು ಟೆನ್ಷನ್ ಮಾಡಿಕೊಳ್ಳಬೇಡಿ. ಹೊಳೆಗಳಲ್ಲಿ ಹೂಳು ಶೇಖರಣೆಯಾಗಿರುವುದ ರಿಂದ ಕಳೆದ ಮಳೆಗಾಲದಲ್ಲಿ ಅನೇಕ ಕಡೆಗಳಲ್ಲಿ ನೆರೆ ಬಂದಿದ್ದು, ಹೂಳು ತೆರವುಗೊಳಿಸಲು ಆಯಾ ಗ್ರಾಪಂಗಳಿಗೆ ಜವಾಬ್ದಾರಿ ನೀಡಬೇಕು ಎಂದು ಅವರು ಹೇಳಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳ ಮಾತಿಗೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಕಳೆದ ವರ್ಷ ಮಳೆಗಾಲದಲ್ಲಿ ನೆರೆ ಬಂದಾಗ ಹೇಳಿದ ಸಮಸ್ಯೆ ಈವತ್ತಿಗೂ ಹಾಗೆ ಇದೆ. ನಿಮ್ಮ ಸಮಸ್ಯೆ ಯನ್ನು ಮೊದಲೇ ಹೇಳಿದರೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಬಹುದಿತ್ತು. ನೀವು ಮಾಡುವ ಕೆಲಸ ಗಳ ಪ್ರಾಕ್ಟಿಕಲ್ ಆಗಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ, ಹಾಲಾಡಿ ಹೊಳೆಯಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಒಂದೇ ಸಲ 300-400 ಲಾರಿಗಳು ಸಂಚರಿಸುವುದರಿಂದ ಶಾಲಾ ಮಕ್ಕಳು ನಡೆದು ಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಹಾಳಾಗುತ್ತಿದೆ. ಗ್ರಾಮ ಪಂಚಾಯತಿ ಲೆಕ್ಕಕ್ಕೇ ಇಲ್ಲ. ಬಲಾಢ್ಯ ಇರುವವರಿಗೆ ಮರಳುದಂಧೆ ಮಾಡಲು ಅವಕಾಶ ನೀಡುತ್ತಿದ್ದು, ಈ ಬಗ್ಗೆ ದೂರು ನೀಡಿದರೆ ಯಾವುದೇ ಸ್ಪಂದನೆ ನೀಡಿಲ್ಲ. ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಪ್ರಸಾದ್, ಕುಂದಾಪುರ ತಾಪಂ ಇಒ ಡಾ.ರವಿಕುಮಾರ್ ಹುಕ್ಕೇರಿ, ಬ್ರಹ್ಮಾವರ ತಾಪಂ ಇಒ ಇಬ್ರಾಹಿಂಪುರ, ಉಡುಪಿ ತಾಪಂ ಇಒ ವಿಜಯ್, ನೀರು ಸರಬರಾಜು ಇಲಾಖೆ ಇಂಜಿನಿಯರ್ ಉದಯ ಕುಮಾರ್ ಶೆಟ್ಟಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.







