49 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಶಿರ್ವ, ಎ.26: ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ 1975-76ನೇ ಸಾಲಿನ ಪಿಯುಸಿ ವಿದ್ಯಾರ್ಥಿ ಗಳು ತಮ್ಮ ಗುರುಗಳೊಂದಿಗೆ ಗುರು ಶಿಷ್ಯರ ಸೌಹಾರ್ದ ಪುನರ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಶಿರ್ವದ ಶ್ಯಾಮ್ ಸ್ವೇರ್‌ನ ಆನ್ಯ ಹೋಟೇಲ್‌ನಲ್ಲಿ ಏರ್ಪಡಿಸಿದ್ದರು.
ನಿವೃತ್ತ ಪ್ರಾಂಶುಪಾಲರುಗಳಾದ ಗಣಪತಿ ಭಟ್, ರಾಜಗೋಪಾಲ್, ಕನ್ನಡ ಭಾಷಾ ಪ್ರಾಧ್ಯಾಪಕ ಬಾಲಸುಬ್ರಹ್ಮಣ್ಯ ಭಟ್, ಶಿಕ್ಷಕರಾದ ವರದರಾಯ ನಾಯಕ್, ಸದಾನಂದ ಪ್ರಭು ಮತ್ತು ವತ್ಸಲಾ ಟೀಚರ್ ಉಪಸ್ಥಿತರಿದ್ದರು. ಎಲ್ಲ ಗುರುಗಳಿಗೆ ಶಿಷ್ಯರು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ಶಿಕ್ಷಕರು ತಮ್ಮ 50 ವರ್ಷಗಳ ಹಳೆಯ ನೆನಪಿನ ಬುತ್ತಿಯನ್ನು ತೆರೆದು ತಮ್ಮ ವಿದ್ಯಾರ್ಥಿಗಳನ್ನು ಹರಸಿದರು.
ಹಿರಿಯ ವಿದ್ಯಾರ್ಥಿ ನಿತ್ಯಾನಂದ ಹೆಗ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬ್ಯಾಚ್‌ನ ಕಾರ್ಯನಿರ್ವಾಹಕ ಹಿರಿಯ ವಿದ್ಯಾರ್ಥಿ ಯೋಗೀಶ್ ಕಾಮತ್ ಒಗ್ಗೂಡುವಿಕೆ ಹಾಗೂ ನಿರ್ವಹಣೆಯ ಕುರಿತು ವರದಿ ನೀಡಿದರು. ಅಗಲಿದ ಗುರುಗಳು ಹಾಗೂ ಸಹಪಾಠಿಗಳನ್ನು ಸ್ಮರಿಸಿ ಶ್ರದ್ದಾಂಜಲಿ ಸಮರ್ಪಿಸಲಾಯಿತು. ಹಿರಿಯ ವಿದ್ಯಾರ್ಥಿನಿ ಸುಮಂಗಲ ಕಾಮತ್ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ನಿತ್ಯಾನಂದ ಹೆಗ್ಡೆ ವಂದಿಸಿದರು.
ಹಿರಿಯ ವಿದ್ಯಾರ್ಥಿಗಳಾದ ಚಂದ್ರಶೇಖರ ರಾವ್, ರಾಮ್ ಮೋಹನ್ ಎಸ್., ದಯಾನಂದ ಸೂಡ, ಜಯಕರ, ರವೀಂದ್ರ ಶೆಟ್ಟಿ, ಮಧುಸೂದನ ಶೆಟ್ಟಿಗಾರ್, ರಾಮಚಂದ್ರ ಕಾಮತ್, ಸದಾನಂದ ಪೈ. ಫೆಡ್ರಿಕ್ ಡಿಲೀಮ, ಶಾಲಿನಿ ಶೆಟ್ಟಿ, ಲೀಲಾವತಿ ಬಳೆಗಾರ್ತಿ, ಶಶಿಕಲ ಭಟ್, ಪೃಥ್ವಿರಾಜ್ ಎಸ್.ಪಿ, ಜಯಪ್ರಕಾಶ್, ಸಕಾರಾಮ ಹೆಗ್ಡೆ ಪಾಲ್ಗೊಂಡಿದ್ದರು.







