ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಅನುದಾನ ನೀಡಿ: ಮುಖ್ಯಮಂತ್ರಿಗೆ ಅಧ್ಯಕ್ಷರ ಮನವಿ

ಉಡುಪಿ: ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಹಾಗೂ ಹಿಂದುಳಿದ ಸಮಾಜದ 26 ಪಂಗಡಗಳನ್ನು ಮುಖ್ಯವಾಹಿನಿಗೆ ತರಲು ಹೊಸದಾಗಿ ಕಾಂಗ್ರೆಸ್ ಸರಕಾರದಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸುವಂತೆ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಂಗಳೂರಿನಲ್ಲಿ ನಡೆಯುವ ಗುರು-ಗಾಂಧಿ ಸಂವಾದ ಶತಮಾನೋತ್ಸವ ಸಮಾರಂಭದ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಗಳಿಗೆ ಈ ಕುರಿತು ನಿಗಮದ ವತಿಯಿಂದ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ನಿಗಮ ಈಗಾಗಲೇ 26 ಪಂಗಡಗಳ ಅಭಿವೃದ್ಧಿಗೆ ನೀಲ ನಕ್ಷೆಯೊಂದನ್ನು ಸಿದ್ಧಪಡಿಸಿದೆ ಎಂದ ಅವರು ಇವುಗಳಲ್ಲಿ ಶಿಕ್ಷಣ, ಉದ್ಯೋಗ, ಉದ್ಯಮ, ಮಹಿಳಾ ಸಬಲೀಕರಣ, ಧಾರ್ಮಿಕ ಹಾಗೂ ಇತರ ಯೋಜನೆಗಳಿವೆ ಎಂದು ವಿವರಿಸಿದರು.
ನಾರಾಯಣ ಗುರುಗಳ ಸಂದೇಶ, ತತ್ವ-ಆದರ್ಶಗಳನ್ನು ಅನುಷ್ಠಾನ ಗೊಳಿಸಲು ನಿಗಮ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದ ಅವರು, ಗುರುಗಳು ಹೇಳಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರಕಿಸುವಲ್ಲಿ ನಿಗಮ ಶ್ರಮಿಸಲಿದೆ ಎಂದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್‌ಗೆ ತರಬೇತಿ ಯೋಜನೆಗಳನ್ನು ಜಾರಿಗೊಳಿಸಲು ನಿಗಮ ಶ್ರಮಿಸಲಿದೆ ಎಂದರು.
ಸ್ವಉದ್ಯೋಗ ನಡೆಸಲು ತರಬೇತಿ ಹಾಗೂ ಸಾಲಸೌಲಭ್ಯ, ಸಮುದಾಯಗಳ ಕುಲಕಸುಬಾದ ನೀರಾ ಉತ್ಪಾದನೆಗೆ ಪ್ರೋತ್ಸಾಹ, ಶೇಂದಿ ಇಳಿಸಲು ಸೂಕ್ತ ತರಬೇತಿಗೆ ಆಧುನಿಕ ಸ್ಪಶರ್ರ್ ನೀಡುವುದು, ನಾಟಿವೈದ್ಯ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ ನೀಡಲಾಗುವುದು. ಕಲ್ಪರಸ ಉತ್ಪಾದನಾ ಉದ್ಯಮ, ಪ್ರವಾಸೋದ್ಯಮ, ಸೇವಾಧಾರಿತ ಉದ್ಯಮ ಸೇರಿದಂತೆ ವಿವಿಧ ಉದ್ಯಮಗಳ ಸ್ಥಾಪನೆಗೆ ತರಬೇತಿಯೊಂದಿಗೆ ಸಬ್ಸಿಡಿ ಸಹಿತ ಬೆಂಬಲ ನೀಡಲಾಗುವುದು ಎಂದವರು ವಿವರಿಸಿದರು.
ಬಿಲ್ಲವ ಸಮುದಾಯದ ಕುಲಕಸಬಾದ ಶೇಂದಿ, ಕಲ್ಪರಸ ತಯಾರಿ ಉದ್ಯಮದ ಮೌಲ್ಯವರ್ಧನೆಗಾಗಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪನೆ, ಡಿಜಿಟಲೀಕರಣದ ಮಾಹಿತಿ, ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರವನ್ನೂ ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಗರಡಿ ಅರ್ಚಕರಿಗೆ ಮಾಸಾಶನ: ಸಮುದಾಯದ ಹಿರಿಯರು ಆರಾಧಿಸಿ ಕೊಂಡು ಬಂದಿರುವ ಗರಡಿಗಳ ಅರ್ಚಕರಿಗೆ ಹಾಗೂ ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರಗಲ ಅರ್ಚಕರಿಗೆ, ಸಹಾಯಕರಿಗೆ ಮಾಸಾಶನ ನೀಡಲು, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ನೀಡುವ ಗುರಿಯಿದೆ, ಮಹಿಳೆಯರ ಸಬಲೀಕರಣಕ್ಕೂ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಇವು ಸೇರಿದಂತೆ ಸಮುದಾಯಗಳ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 500 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಇದಕ್ಕಾಗಿ ನಾಳೆ ಮುಖ್ಯಮಂತ್ರಿಗಳಿಗೆ ನಿಗಮದ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದೂ ಮಂಜುನಾಥ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಸಮುದಾಯದ ಮುಖಂಡರಾದ ಅಶೋಕ ಪೂಜಾರಿ, ಮಹೇಶ್ ಆಂಚನ್ ಹಾಗೂ ಡಾ.ಸಂತೋಷ ಕುಮಾರ್ ಬೈರಂಪಳ್ಳಿ ಉಪಸ್ಥಿತರಿದ್ದರು.







