ಫೆ.6ರವರೆಗೆ ಶ್ರೀಕೃಷ್ಣಮಠದಲ್ಲಿ ಶ್ರೀಮಧ್ವನವಮಿ ಉತ್ಸವ

ಉಡುಪಿ, ಜ.30: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ತುಶಿಮಾಮ) ಸಹಯೋಗದಲ್ಲಿ ಶ್ರೀಮಧ್ವ ನವಮ್ಯುತ್ಸವವು ಗುರುವಾರ ಆರಂಭವಾಗಿದ್ದು ಫೆ.6ರ ತನಕ ನಡೆಯಲಿದೆ ಎಂದು ಶ್ರೀಕೃಷ್ಣಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.
ಗುರುವಾರ ಶ್ರೀಕೃಷ್ಣ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮಗಳ ವಿವರ ನೀಡಿದರು. ಪ್ರತಿದಿನ ಸಂಜೆ 6ಗಂಟೆಗೆ ರಾಜಾಂಗಣದಲ್ಲಿ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ಶ್ರೀಮಧ್ವ ವಿಜಯದಲ್ಲಿ ಗೀತಾ ಚಿಂತನೆ ವಿಷಯವಾಗಿ ಉಪನ್ಯಾಸ ನಡೆಯಲಿದೆ ಎಂದರು.
ಆಚಾರ್ಯ ಮಧ್ವರ ನಿತ್ಯ ಅದೃಶ್ಯ ಸನ್ನಿಧಾನ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ತುಶಿಮಾಮ ಸದಸ್ಯರಿಂದ ಮಧ್ವನಾ ಮಾವಳಿ ಪಾರಾಯಣವು ಪ್ರತಿ ದಿನ ಬೆಳಗ್ಗೆ 10ಗಂಟೆಗೆ ಹಾಗೂ ರಥಬೀದಿಯಲ್ಲಿ ಪ್ರತಿ ದಿನ ಸಂಜೆ 5ಗಂಟೆಗೆ ತುಶಿಮಾಮ ಮಹಿಳಾ ಸದಸ್ಯರಿಂದ ಶ್ರೀಮಧ್ವನಾಮ ಪಾರಾಯಣ ಸಹಿತ ಪ್ರದಕ್ಷಿಣಾ ಮೆರವಣಿಗೆ ಜರುಗಲಿದೆ.
ಪ್ರಾತಃಕಾಲದಲ್ಲಿ ಶ್ರೀಅನಂತೇಶ್ವರ ದೇವಸ್ಥಾನದ ಆಚಾರ್ಯ ಮಧ್ವರ ನಿತ್ಯ ಅದೃಶ್ಯ ಸನ್ನಿಧಾನದಲ್ಲಿ ವಿದ್ವಾಂಸರು ಆಚಾರ್ಯ ಮಧ್ವ ರಚಿತ ಸರ್ವಮೂಲ ಗ್ರಂಥಗಳ ಪಾರಾಯಣ ಮಾಡಲಿದ್ದಾರೆ. ಫೆ. 6ರಂದು ಮಧ್ವನಮಿ ಅಂಗವಾಗಿ ಬೆಂಗಳೂರಿನ ಭಕ್ತರು ಶ್ರೀನಾರಾಯಣ ಪಂಡಿತಾಚಾರ್ಯ ರಚಿತ ಶ್ರೀಮಧ್ವವಿಜಯ ಪಾರಾಯಣವನ್ನು ಫೆ.6ರಂದು ಬೆಳಗ್ಗಿನಿಂದ ಮಧ್ಯಾಹ್ನ ತನಕ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಿದ್ದಾರೆ ಎಂದರು.
ಫೆ.6ರಂದು 324 ವಿಪ್ರರು ತ್ರಿವಿಕ್ರಮ ಪಂಡಿತಾಚಾರ್ಯ ರಚಿತ ವಾಯುಸ್ತುತಿ ಪಾರಾಯಣ ಮಾಡಲಿದ್ದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಮಧು ಅಭಿಷೇಕ ನೆರವೇರಿಸುವರು. ಫೆ. 5, 6ರಂದು ಶ್ರೀಕೃಷ್ಣಮಠ ಹಾಗೂ ಶ್ರೀಅನಂತೇಶ್ವರ ಸನ್ನಿಧಿಯಲ್ಲಿ ಅರಳು ಮಲ್ಲಿಗೆ ಪಾರ್ಥ ಸಾರಥಿ ಶಿಷ್ಯವೃಂದದಿಂದ ವಿಷ್ಣು ಸಹಸ್ರನಾಮ ಹಾಗೂ ವಾಯುಸ್ತುತಿ ಪಾರಾಯಣ ನಡೆಯಲಿದೆ.
ಆಕ್ಸ್‌ಫರ್ಡ್ ವಿವಿಯಲ್ಲಿದ್ದ 600ವರ್ಷಗಳಿಗೂ ಹಿಂದಿನ ನೇವಾರಿ ಲಿಪಿ ಲಿಖಿತ ಭಗವದ್ಗೀತೆಯ ವಫೆರ್‌ಫಿಚೆ ಪ್ರತಿಯನ್ನು ತಾರಾ ಪ್ರಕಾಶನ ಸಂಸ್ಥೆಯು ಮಧ್ವನವಮಿ ಸಂದರ್ಭ ರಾಜಾಂಗಣದಲ್ಲಿ ಪರ್ಯಾಯ ಶ್ರೀಸುಗುಣೇಂದ್ರತೀರ್ಥರ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಲಿದೆ. ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ಓಡಾಡಿದ ನಾನಾ ಕ್ಷೇತ್ರಗಳ 19 ಪ್ರತಿನಿಧಿಗಳಿಗೆ ಪ್ರತಿ ದಿನವೂ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನಾಚಾರ್ಯ, ರಮೇಶ್ ಭಟ್, ವಿಜಯ ರಾಘವ ರಾವ್, ಮಹಿತೋಷ್ ಆಚಾರ್ಯ ಉಪಸ್ಥಿತರಿದ್ದರು.







