ಫೆ.6ರಿಂದ ರಾಗಧನದಿಂದ ಸಂಗೀತ ತ್ರಿಮೂರ್ತಿ ಉತ್ಸವ

ಉಡುಪಿ, ಜ.31: ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಇದೇ ಫೆ.6ರಿಂದ 8ರವರೆಗೆ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.
ಫೆ.6ರಂದು ಸಂಜೆ ಮಂಗಳೂರಿನ ‘ಆರೋಹಣಂ’ ಸಂಗೀತ ಶಾಲೆಯ ಡಾ.ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ ಇದ್ದು, ಸಂಜೆ 6 ಗಂಟೆಗೆ ಮೈಸೂರಿನ ಖ್ಯಾತ ಕಲಾ ವಿಮರ್ಶಕರಾದ ಪ್ರೊ.ರಾಮಮೂರ್ತಿ ರಾವ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿ ಗಳಾಗಿ ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪುರಂದರ ಗಾನ ನರ್ತನ ಎಂಬ ಶೀರ್ಷಿಕೆಯಡಿ ಸತತವಾಗಿ 6 ಗಂಟೆ 13 ನಿಮಿಷಗಳ ಕಾಲ ಪುರಂದರದಾಸರ ಹಾಡುಗಳಿಗೆ ಸ್ವತಃ ಹಾಡಿಕೊಂಡು ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವ ದಾಖಲೆ ಸಾಧಿಸಿದ ದೀಕ್ಷಾ ರಾಮಕೃಷ್ಣ ಇವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಗೌರವಿಸಲಾಗುವುದು.
ಸಂಜೆ 6:30ಕ್ಕೆ ಚೆನ್ನೈನ ಖ್ಯಾತ ಸಂಗೀತಗಾರರಾದ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಫೆ.7ರಂದು ಶನಿವಾರ ಅಪರಾಹ್ನ 2 ಗಂಟೆಗೆ ಪಿಳ್ಳಾರಿ ಗೀತೆಗಳು, ಶ್ರೀತ್ಯಾಗರಾಜರ ಘನ ಪಂಚ ರತ್ನ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 4:30ಕ್ಕೆ ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ರಾಗಧನ ಪಲ್ಲವಿ ಪ್ರಶಸ್ತಿಯನ್ನು ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗರಿಗೆ ಡಾ.ಗಣಪತಿ ಜೋಯಿಸ ಇವರು ಪ್ರದಾನ ಮಾಡುವರು. ಸಂಜೆ 5:30ಕ್ಕೆ ’ರಾಗಧನ ಪಲ್ಲವಿ ಪ್ರಶಸ್ತಿ’ ಪುರಸ್ಕೃತ ಪ್ರಜ್ಞಾ ಅಡಿಗ ಇವರ ಕಚೇರಿ ನಡೆಯಲಿದೆ.
ಫೆಬ್ರವರಿ 8ರಂದು ಬೆಳಿಗ್ಗೆ 9 ರಿಂದ ಹಿಂದುಸ್ತಾನಿ ಗಾಯನ ಕಛೇರಿಯನ್ನು ಮಹಾರಾಷ್ಟ್ರದ ಧನಂಜಯ ಜೋಶಿ ನಡೆಸಿ ಕೊಡಲಿದ್ದಾರೆ. ಬೆಳಗ್ಗೆ 11:15ರಿಂದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ವಿಷಯವಾಗಿ ಆತ್ರೇಯೀ ಕೃಷ್ಣಾ ಕಾರ್ಕಳ ಸಂಗೀತ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಅಪರಾಹ್ನ 2ರಿಂದ ಅದಿತಿ ಕೊಂಕೋಡಿ ಹಾಡುಗಾರಿಕೆ ನಡೆಸಿಕೊಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಭರತನಾಟ್ಯ ಕಲಾವಿದೆ ಲಕ್ಷ್ಮಿ ಗುರುರಾಜ್ ಮತ್ತು ಡಾ. ಬಾಲಕೃಷ್ಣ ಮದ್ದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಬೆಂಗಳೂರಿನ ವಿನಯ್ ಶರ್ಮ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







