6 ತಿಂಗಳಲ್ಲಿ 174 ಮಹಿಳಾ ದೌರ್ಜನ್ಯ ಪ್ರಕರಣ ದಾಖಲು: ಉಡುಪಿ ಡಿಸಿ ವಿದ್ಯಾಕುಮಾರಿ

ಉಡುಪಿ, ಮಾ.1: ಜಿಲ್ಲೆಯಲ್ಲಿ ಕಳೆದ 2024ರ ಜುಲೈನಿಂದ 2025ರ ಜನವರಿ ತಿಂಗಳವರೆಗೆ ಆರು ತಿಂಗಳ ಅವಧಿಯಲ್ಲಿ 174 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 125 ಪ್ರಕರಣಗಳು ಇತ್ಯರ್ಥ ಗೊಂಡಿವೆ. 14 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 7 ಪ್ರಕರಣಗಳು, ಕಾನೂನು ಸಮಾಲೋಚನೆಯಲ್ಲಿ 15, ಪೊಲೀಸ್ ಠಾಣೆಯಲ್ಲಿ 1 ಹಾಗು ಆಪ್ತ ಸಮಾಲೋಚನೆಯಲ್ಲಿ 12 ಪ್ರಕರಣಗಳು ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗಳಿಸಬೇಕು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಕುರಿತ ಕಾನೂನು ಕ್ರಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಮಾಜದಲ್ಲಿ ದುರ್ಬಲರಾದ ಹೆಣ್ಣು ಮಕ್ಕಳು ಹಾಗೂ ಮಕ್ಕಳ ಮೇಲೆ ದೌರ್ಜನ್ಯವಾದಾಗ ನೊಂದ ಸಂತ್ರಸ್ತರಿಗೆ ಸಾಂತ್ವನ ಹೇಳುವುದರ ಜೊತೆಗೆ ಅಗತ್ಯವಿರುವ ಕಾನೂನಿನ ನೆರವು, ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಡಾ.ಕೆ. ವಿದ್ಯಾಕುಮಾರಿ ಸಲಹೆ ನೀಡಿದರು.
ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ, ವಿಚ್ಚೇಧನ, ಬಹು ಪತ್ನಿತ್ವ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ, ಕಾನೂನು ನೆರವುಗಳನ್ನು ಒದಗಿಸಬೇಕು. ಇದರ ಜೊತೆಯಲ್ಲಿಯೇ ಅವರಿಗೆ ಸ್ವಉದ್ಯೋಗ ಮಾಡಲು ಉತ್ತೇಜನ ನೀಡಿ, ಆರ್ಥಿಕವಾಗಿ ಸ್ವಾವಲಂಬಿ ಗಳಾಗಲು ಪ್ರೇರಣೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ತಾಯಿ ಕಾರ್ಡ್ ಪಡೆದು ಹೆರಿಗೆಯಾದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಬೇಕು. ಕೆಲವು ಫಲಾನುಭವಿಗಳಿಗೆ ಎನ್‌ಪಿಸಿಐ ಮ್ಯಾಪಿಂಗ್ ಆಗದೆ ಸೌಲಭ್ಯಗಳು ದೊರಕಿರುವುದಿಲ್ಲ. ಇವರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು. ಎರಡನೇಯದು ಹೆಣ್ಣು ಮಗುವಾಗಿದ್ದಲ್ಲಿ ಅವರು ಸಹ ಈ ಯೋಜನೆಯ ಎರಡನೇ ಕಂತಿನ ಲಾಭ ಪಡೆಯಬೇಕು. ಇದರಲ್ಲಿ ಶೇ.ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಲಿಂಗ ತಾರತಮ್ಯ ಹೋಗಲಾಡಿಸಲು ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡಲು ಜಾರಿಗೆ ತಂದಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದ ಅವರು, ಜನನ ಸಮಯದಲ್ಲಿ ಲಿಂಗಾನುಪಾತ ಸುಧಾರಿಸಲು ಹೆಣ್ಣು ಮಗುವಿನ ಭ್ರೂಣ ಹತ್ಯೆ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಎಚ್ಚರವಹಿಸಬೇಕು ಎಂದರು.
ಸ್ತ್ರೀಶಕ್ತಿ ಯೋಜನೆಯ ಗುಂಪುಗಳ ಸದಸ್ಯರಿಗೆ ಅದಾಯೋತ್ಪನ್ನ ವಿವಿಧ ಚಟುವಟಿಕೆಗಳಾದ ಕೃಷಿ, ಹೈನುಗಾರಿಕೆ, ಟೈಲರಿಂಗ್, ಸಣ್ಣ ಪ್ರಮಾಣದ ಸಿದ್ದ ತರಬೇತಿ ನೀಡಿ, ಅವರುಗಳು ಉದ್ಯೋಗ ಹೊಂದಿ ಆರ್ಥಿಕವಾಗಿ ಸ್ವಾವಲಂಬಿ ಗಳಾಗಲು ಪ್ರೋತ್ಸಾಹಿಸಬೇಕು. ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರ ಸಮಗ್ರ ಪೌಷ್ಟಿಕಾಂಶ ಮತ್ತು ಆರೋಗ್ಯದ ಅಗತ್ಯತೆಗಳನ್ನು ಪೂರೈಸಲು ಪೋಷಣ್ ಅಭಿಯಾನದ ಅನುಷ್ಠಾನ ಸಮರ್ಪಕವಾಗಿರಬೇಕು ಎಂದರು.
ಜಿಲ್ಲೆಯಲ್ಲಿ 1222 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1052 ಸ್ವಂತ ಕಟ್ಟಡಗಳಲ್ಲಿ, ಕೆಲವು ಬಾಡಿಗೆ ಕಟ್ಟಡಗಳಲ್ಲಿ, ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಅಂಗನವಾಡಿ ಕೇಂದ್ರಗಳ ಮಕ್ಕಳ ಆರೋಗ್ಯವನ್ನು ಆಗಾಗ ತಪಾಸಣೆ ನಡೆಸಬೇಕು. ಪೌಷ್ಠಿಕಾಂಶ ಆಹಾರ ನೀಡಲು ಆದ್ಯತೆ ನೀಡಬೇಕು. ತೀವ್ರ ಅಪೌಷ್ಠಿಕ ಹಾಗೂ ಸಾಧಾರಣ ತೂಕದ ಮಕ್ಕಳಿಗೆ ಒಂದೂವರೆ ಪಟ್ಟು ಪೌಷ್ಠಿಕ ಆಹಾರ ನೀಡಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಎಸ್ಪಿ ಸಿದ್ಧಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ. ಕೆ, ಡಿಡಿಪಿಐ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಹಿಳಾ ಮಂಡಳಿಗಳ ಪದಾಧಿಕಾರಿಗಳು, ಸಾಂತ್ವನ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.







