ಸೆ.6-7: ಯುಎಇಯಲ್ಲಿ ಅಂ.ರಾ. ಜಾನಪದ ಉತ್ಸವ

ಉಡುಪಿ, ಆ.16: ಕರ್ನಾಟಕದ ಜಾನಪದ ಪ್ರಕಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್‌ನ ಯುಎಇ ಘಟಕದ ಉದ್ಘಾಟನೆಯ ಸಂದರ್ಭದಲ್ಲಿ ಮುಂದಿನ ಸೆ.6 ಮತ್ತು 7ರಂದು ಯುಎಇಯ ದುಬಾಯಿಯಲ್ಲಿ ಅಂತಾರಾಷ್ಟ್ರೀಯ ಜಾನಪದ ಉತ್ಸವವೊಂದನ್ನು ಆಯೋಜಿಸಲಾ ಗುತ್ತಿದೆ ಎಂದು ಉತ್ಸವದ ನಿರ್ದೇಶಕ ಹಾಗೂ ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಾಸುಮ ಕೊಡಗು, ದುಬಾಯಿಯ ಬ್ಯುಸಿನೆಸ್‌ಬೇಯ ರಾಮಿಡ್ರೀಮ್ಸ್ ಪಂಚತಾರಾ ಹೊಟೇಲ್ ಸಭಾಂಗಣದಲ್ಲಿ ಎರಡು ದಿನಗಳ ಈ ಉತ್ಸವ ನಡೆಯಲಿದೆ ಎಂದರು.
ರಾಜ್ಯದ ಸುಮಾರು 12 ಜಾನಪದ ತಂಡಗಳನ್ನು ದುಬಾಯಿಗೆ ಆಮಂತ್ರಿಸಿ, ಜಗತ್ತಿನ ನಾನಾ ರಾಷ್ಟ್ರಗಳ ಸುಮಾರು 2000ಕ್ಕೂ ಅಧಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿ, ನಾಡಿನ ಸಾಂಸ್ಕೃತಿಕ, ಜನಪದ ಕಲೆಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶವನ್ನೂ ಈ ಉತ್ಸವ ಹೊಂದಿದೆ ಎಂದರು.
ಉತ್ಸವದಲ್ಲಿ ಕರಾವಳಿಯ ಹುಲಿವೇಷ ಕುಣಿತ, ಕಂಗಿಲು ನೃತ್ಯ, ಮರಾಠಿ ಹೋಳಿ ನೃತ್ಯ, ಯಕ್ಷಗಾನ ಗೊಂಬೆಯಾಟ ಅಲ್ಲದೇ ರಾಜ್ಯದ ವಿವಿದೆಡೆ ಗಳಿಂದ ಡೊಳ್ಳು ಕುಣಿತ, ಸೋಲಿಗರ ನೃತ್ಯ, ಕಂಸಾಳೆ ಮೊದಲಾದ ತಂಡಗಳು ಪ್ರದರ್ಶನ ನೀಡಲಿವೆ ಎಂದು ಬಾಸುಮ ತಿಳಿಸಿದರು.
ಜಾನಪದ ಉತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್. ಆಂಜನೇಯ, ಡಾ.ಮೋಹನ ಆಳ್ವ, ಬೆಂಗಳೂರಿನ ಪ್ರೊ.ರಾಧಾಕೃಷ್ಣ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಭಾಗವಹಿ ಸಲಿದ್ದಾರೆ. ಅಧ್ಯಕ್ಷತೆಯನ್ನು ಜಾನಪದ ಪರಿಷತ್‌ನ ಯುಎಇ ಘಟಕದ ಅಧ್ಯಕ್ಷ ಸಾದನ್‌ದಾಸ್ ವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಕೊಡಗಿನ ರಾಣಿ ಮಾಚಯ್ಯ ಹಾಗೂ ಮೈಸೂರಿನ ಮಳವಳ್ಳಿ ಮಹದೇವ ಇವರಿಗೆ ‘ಎಚ್.ಎಲ್.ನಾಗೇಗೌಡ ಜಾನಪದ ಪ್ರಶಸ್ತಿ’ ನೀಡಲಾಗುವುದು. ಅಲ್ಲದೇ ಹಿರಿಯ ಕಲಾಪೋಷಕ ರಾಮೀ ಹೊಟೇಲ್ ಸಮೂಹದ ಪ್ರವರ್ತಕ ವರದರಾಜ್ ಶೆಟ್ಟಿ ಇವರಿಗೆ ‘ಕನ್ನಡ ಕಲಾಪೋಷಕ’ ಪ್ರಶಸಿ ನೀಡಿ ಗೌರವಿಸಲಾಗುವುದು ಎಂದರು.
ಎರಡು ದಿನಗಳ ಉತ್ಸವದಲ್ಲಿ ಜಾನಪದ ಕಲಾಪ್ರದರ್ಶನದ ಜೊತೆಗೆ ವಿವಿಧ ವಿಚಾರಗೋಷ್ಠಿಗಳು, ಕಲಾಕೃತಿಗಳ ಪ್ರದರ್ಶನ, ವಸ್ತುಪ್ರದರ್ಶನ ಸಹ ಇರಲಿದೆ ಎಂದೂ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವದ ಸಂಚಾಲಕ ಪ್ರಶಾಂತ್ ಆಚಾರ್ಯ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಕಾವ್ಯ ವಾಣಿ ಕೊಡಗು ಉಪಸ್ಥಿತರಿದ್ದರು.







