ಆ.7ರಂದು ರೆಡ್‌ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್ ಕಟ್ಟಡಕ್ಕೆ ಶಂಕು ಸ್ಥಾಪನೆ
ಕುಂದಾಪುರ, ಆ.1: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಶಾಖೆ ವತಿಯಿಂದ ಕುಂದಾಪುರದ ತಾಲೂಕಿನ ವಕ್ವಾಡಿಯಲ್ಲಿ ಸುಮಾರು 1.25 ಎಕ್ರೆ ಜಾಗದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರೆಡ್‌ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮ ಆ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಶಾಖೆ ಸಭಾಪತಿ ಎಸ್.ಜಯಕರ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನೂತನವಾಗಿ ನಿರ್ಮಾಣ ಗೊಳ್ಳಲಿರುವ ಸುಮಾರು 20 ಸಾವಿರ ಚದರ ಅಡಿಯ ಕಟ್ಟಡದಲ್ಲಿ 28 ಸುಸಜ್ಜಿತವಾದ ಕೋಣೆಗಳಿರುತ್ತದೆ. ಅದಲ್ಲದೆ ಊಟದ ಹಾಲ್, ವೈದರ ತಪಾಸಣಾ ಕೊಠಡಿ, ವಾಚನಾಲಯ, ಯೋಗ ಕೊಠಡಿ ಇತ್ಯಾದಿ ವ್ಯವಸ್ಥೆಗಳನ್ನು ಒಳಗೊಂಡಿದೆ. ಕಟ್ಟಡದ ಸುತ್ತಮುತ್ತ ಉದ್ಯಾನವನ ರಚಿಸಿ ಉತ್ತಮ ವಾತಾವರಣವನ್ನು ರಚಿಸುವ ಚಿಂತನೆ ಮಾಡಲಾ ಗಿದ್ದು, ಇದಕ್ಕಾಗಿ ಒಟ್ಟು ಅಂದಾಜು 7 ರಿಂದ 8 ಕೋಟಿಯಷ್ಟು ವೆಚ್ಚ ತಗುಲಲಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ ರಾವ್ ಶಿಲಾನ್ಯಾಸ ನೆರವೇರಿಸ ಲಿದ್ದು, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿರುವರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಶಾಖೆ ಸಭಾಪತಿ ಎಸ್.ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ತಿಳಿಸಿದರು.
ಉಪಸಭಾಪತಿ ಡಾ. ಉಮೇಶ ಪುತ್ರನ್, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಖಜಾಂಜಿ ಶಿವರಾಮ ಶೆಟ್ಟಿ, ತಾಲೂಕು ಘಟಕದ ಸದಸ್ಯರಾದ ವೈ. ಸೀತಾರಾಮ ಶೆಟ್ಟಿ, ಗಣೇಶ ಆಚಾರ್ಯ, ಡಾ. ಸೋನಿ ಡಿ ಕೋಸ್ಟ, ಎನ್. ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಇದ್ದರು.







