ಅ.7ರಂದು ಆಕಾಶದಲ್ಲಿ ಕಾಣಿಸಲಿದೆ ವರ್ಷದ ಮೊದಲ ‘ಸೂಪರ್‌ಮೂನ್’

ಉಡುಪಿ, ಅ.6: ಸೂಪರ್‌ಮೂನ್‌ಗಳು ಕಾಣುವುದು ಹುಣ್ಣಮೆಯ ದಿನದಂದು. ವರ್ಷದ ಮೊದಲ ಸೂಪರ್ ಮೂನ್ ಅ.7ರಂದು ಹುಣ್ಣಿಮೆಯ ರಾತ್ರಿ ಆಕಾಶದಲ್ಲಿ ಕಾಣಿಸಲಿದೆ. ಈ ವರ್ಷದ ಸೂಪರ್‌ಮೂನ್ ಗಳ ಸರಣಿ ಮಂಗಳವಾರ ದಿಂದ ಪ್ರಾರಂಭಗೊಳ್ಳಲಿದೆ.
ಅ.7ರ ನಂತರ ನವೆಂಬರ್ 5 ಹಾಗೂ ಡಿಸೆಂಬರ್ ತಿಂಗಳ 4ರಂದು ಹುಣ್ಣಿಮೆ ದಿನಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಖ್ಯಾತ ಖಗೋಳ ವಿಜ್ಞಾನಿ, ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಭೂಮಿ ಹಾಗೂ ಚಂದ್ರರ ಸರಾಸರಿ ದೂರ 3 ಲಕ್ಷ 84 ಸಾವಿರ ಕಿ.ಮೀ. ನಾಳೆ ಇದು ಸುಮಾರು 3 ಲಕ್ಷ 61 ಸಾವಿರ ಕೀಮೀಗೆ ಇಳಿಯಲಿದೆ. ಇದರಿಂದ ಚಂದ್ರ ಸುಮಾರು 23 ಸಾವಿರ ಕಿ.ಮೀಗಳಷ್ಟು ಭೂಮಿಗೆ ಸಮೀಪ ಬಂದು ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ.
ಇದರಿಂದಾಗಿ ತಣ್ಣನೆಯ ಬೆಳದಿಂಗಳೂ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹುಣ್ಣಿಮೆಯೇ ಚೆಂದ. ಶರತ್ಕಾಲದ ಆಶ್ವಯುಜ ಆಕಾಶ ಭವ್ಯ. ತಿಳಿ ಬಿಳಿ ತೇಲುವ ಮೋಡಗಳ ಮಧ್ಯೆ ಬೆಳ್ಳಂಬೆಳದಿಂಗಳ ಚಂದ್ರಮ ಇನ್ನೂ ಚೆಂದ. ಅದರಲ್ಲೂ ಈಗ ಬಂದಿರುವ ಶರತ್ಕಾಲದ ಸೂಪರ್‌ಮೂನ್ ಬೆಳದಿಂಗಳನ್ನು ಎಲ್ಲರೂ ಸವಿಯಬೇಕು. ಖಗೋಳಪ್ರಿಯರಿಗೆ ಇದು ರಸದೌತಣ ಎನಿಸಲಿದೆ ಎಂದು ಡಾ.ಭಟ್ ಹೇಳಿದ್ದಾರೆ.
ಈ ಸೂಪರ್‌ಮೂನ್‌ನ್ನು ಹಾರ್ವೆಸ್ಟ್ ಮೂನ್ ಎಂದು ಸಹ ಕರೆಯುತ್ತಾರೆ. ಸುಗ್ಗಿಯ ಈ ಕಾಲದಲ್ಲಿ ಬೆಳೆ ಕಟಾವು ಮಾಡುವಷ್ಟು ಚಂದ್ರ ಪ್ರಕಾಶಮಾನ ವಾಗಿರುವುದರಿಂದ ಇದನ್ನು ‘ಹಾರ್ವೆಸ್ಟ್ ಮೂನ್’ ಎಂದು ಕರೆಯಲಾಗುತ್ತಿದೆ. ಭಾರತದಲ್ಲಿ ಈ ಹಿಂದೆ 2020ರಲ್ಲಿ ಸೂಪರ್‌ಮೂನ್ ಕಾಣಿಸಿಕೊಂಡಿತ್ತು.
ನಾಳೆ ಆಕಾಶದ ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ ಹಳದಿ ವರ್ತುಲದ ಹ್ಯಾಲೋ ಕೂಡಾ ಕಾಣಸಿಗಬಹುದು ಎಂದಿರುವ ಡಾ.ಭಟ್, ಪ್ರಕೃತಿಯ ವೈಭವವನ್ನು ಆರಾಧಿಸಿ, ಆಸ್ವಾದಿಸುವಂತೆ ಪ್ರಕೃತಿಪ್ರಿಯರಿಗೆ ಮನವಿ ಮಾಡಿದ್ದಾರೆ.







