ಸೆ.7ರಂದು ವಂದೇ ಮಾತರಂ ರಾಷ್ಟ್ರಗೀತೆ ಜನಜಾಗೃತಿ ಅಭಿಯಾನ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ ಸೆ.5: ಕೇಂದ್ರ ಸರಕಾರವು ವಂದೇ ಮಾತರಂ ಅನ್ನು ರಾಷ್ಟ್ರಗೀತೆಯೆಂದು ಘೋಷಿಸಿದ್ದನ್ನು ಸಮರ್ಥಿಸಿಕೊಂಡು ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಂದೇ ಮಾತರಂ ರಾಷ್ಟ್ರಗೀತೆ ಜನಜಾಗೃತಿ ಅಭಿಯಾನ ಸೆ.7ರಂದು ಕುಂದಾಪುರದಿಂದ ಸಾಸ್ತಾನದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 18ಕಿ.ಮೀ. ದೂರದವರೆಗೆ ಪಾದಯಾತ್ರೆ ಮೂಲಕ ನಡೆಯಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಂದಾಪುರದ ಹೊಸ ಬಸ್ ನಿಲ್ದಾಣ ಬಳಿ ಬೆಳಗ್ಗೆ 8.30ಕ್ಕೆ ಕೇರಳದ ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಬೆಳಗ್ಗೆ 9.30ಕ್ಕೆ ಶಾಸ್ತ್ರಿ ಸರ್ಕಲ್ ಬಳಿ ಸಭಾ ಕಾರ್ಯಕ್ರಮ ನಡೆಯಲಿದ್ದು, 10.15ಕ್ಕೆ ಹೊರಟು, ಕೋಟೇಶ್ವರಕ್ಕೆ 11.15ಕ್ಕೆ, ಮಧ್ಯಾಹ್ನ ತೆಕ್ಕಟ್ಟೆಯಲ್ಲಿ ಕೆಲ ಕಾಲ ವಿಶ್ರಾಂತಿ, ಆ ಬಳಿಕ ಮಧ್ಯಾಹ್ನ 3 ಗಂಟೆಗೆ ಕೋಟ, 4 ಗಂಟೆಗೆ ಸಾಲಿಗ್ರಾಮ, ಸಂಜೆ 5 ಗಂಟೆಗೆ ಸಾಸ್ತಾನ ಟೋಲ್ ಗೇಟ್ ಆಗಿ, 5.30ಕ್ಕೆ ಸಾಸ್ತಾನ ಪೇಟೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕೇಂದ್ರ ಸರಕಾರ ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿದೆ. ಅದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾಲ್ನಡಿಗೆ ಜಾಥಾ ನಡೆಯು ತ್ತಿದೆ. ನಮ್ಮೊಂದಿಗೆ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುಧೀರ್ ಕೆ.ಎಸ್., ಪ್ರಮುಖರಾದ ರಾಜೇಶ್ ಕಾವೇರಿ, ಸದಾನಂದ ಬಳ್ಕೂರು, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.






